ಸಂಸದೆ ಹೇಮಾಮಾಲಿನಿಯ ಮುಂದೆ ‘ಶೋಲೆ’ ಮಾದರಿಯ ಪ್ರತಿಭಟನೆ
ಆಗ್ರಾ, ಎ.30: ಕನಸಿನ ಕನ್ಯೆಯ ಶೋಲೆ ಚಿತ್ರವನ್ನು ನೆನಪಿಸುವ ಶೈಲಿಯಲ್ಲೇ ಅಣಕಿಸಿ ಇಬ್ಬರು ಯುವಕರು ನಟಿ- ಸಂಸದೆ ಹೇಮಾ ಮಾಲಿನಿ ವಿರುದ್ಧ ವಿಶಿಷ್ಟ ಪ್ರತಿಭಟನೆ ನಡೆಸಿದರು. ಮಥುರಾದ ಇಬ್ಬರು ಯುವಕರು ಅಕ್ಷರಶಃ ಶೋಲೆ ಚಿತ್ರದ ವೀರೂಗಳಾದರು.
ಶುಕ್ರವಾರ ಓವರ್‌ಹೆಡ್ ಟ್ಯಾಂಕ್ ಏರಿದ್ದು ವಿಸ್ಕಿ ಬಾಟಲಿಯೊಂದಿಗೆ ಅಲ್ಲ; ಸೀಮೆಎಣ್ಣೆ ಬಾಟಲಿಯೊಂದಿಗೆ ಸಂಸದೆ ಚುನಾವಣಾ ಸಂದರ್ಭದಲ್ಲಿ ನೀಡಿದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಆಶ್ವಾಸನೆಯನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರಲ್ಲಿ ಇಬ್ಬರು ಟ್ಯಾಂಕ್ ಮೇಲೆ ಹತ್ತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದರು.
ಮಥುರಾ ಬಳಿಕ ನಗ್ಲಾ ಅಶಾ ಗ್ರಾಮದಲ್ಲಿ ರಣವೀರ್ ಹಾಗೂ ಗೋವಿಂದ್ ಈ ಶೋಲೆ ದೃಶ್ಯ ಅಭಿನಯಿಸಿದಾಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಯುವಕರ ಮನವೊಲಿಸಲು ನಾಗರಿಕರು, ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮೂರು ಗಂಟೆ ಬೇಕಾಯಿತು. ಪರಿಸ್ಥಿತಿಯ ತೀವ್ರತೆಯನ್ನು ಸಂಸದೆಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಬಳಿಕವಷ್ಟೇ ಯುವಕರು ಕೆಳಕ್ಕೆ ಇಳಿದರು.
ಯುವಕರ ಪ್ರಕಾರ, ಆ ಪ್ರದೇಶಕ್ಕೆ ನೀರು ಪೂರೈಸಲು ಗ್ರಾಮದ ಹೊರಗೆ ಕೆಲ ತಿಂಗಳ ಹಿಂದೆ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಇದುವರೆಗೂ ನೀರು ಪೂರೈಕೆ ಆರಂಭಿಸಿಲ್ಲ. ಈ ಕಾರಣದಿಂದ ಗ್ರಾಮಸ್ಥರು ಗಡಸು ನೀರನ್ನೇ ಹ್ಯಾಂಡ್‌ಪಂಪ್‌ಗಳ ಮೂಲಕ ಮೇಲೆತ್ತಿ ಕುಡಿಯಬೇಕಾಗಿದೆ. ಗ್ರಾಮಸ್ಥರ ಪ್ರಕಾರ, ಕುಡಿಯುವ ನೀರಿಗಾಗಿ ನಾಲ್ಕರಿಂದ ಐದು ಕಿಲೋಮೀಟರ್ ಹೋಗಬೇಕಾಗುತ್ತದೆ. ನಗರ ಪಾಲಿಕೆ ಪ್ರತಿನಿಧಿಗಳ ಪ್ರಕಾರ ಗ್ರಾಮಸ್ಥರು 4,000-5,000 ಟಿಡಿಎಸ್ (ಒಟ್ಟು ಕರಗಿದ ಘನವಸ್ತು ಪ್ರಮಾಣ) ಇರುವ ನೀರನ್ನು ಸೇವಿಸಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯ ಪ್ರಕಾರ 400-500 ಟಿಡಿಎಸ್‌ನ ನೀರಷ್ಟೇ ಕುಡಿಯಲು ಯೋಗ್ಯ.







