ವಿಜೇಂದರ್ ಪಂಚ್ ಗೆ ತತ್ತರಿಸಿದ ರೋಯರ್: ಸತತ ಐದನೇ ಜಯ

ಲಂಡನ್, ಮೇ 1: ಭಾರತದ ಸ್ಟಾರ್ ಬಾಕ್ಸರ್ ವಿಜೇಂದ್ರ ಅವರ ಜೈತ್ರಯಾತ್ರೆ ಮುಂದುವರಿದಿದೆ. ಅವರ ಶಕ್ತಿಶಾಲಿ ಪಂಚ್‌ಗಳಿಗೆ ಎದುರಾಳಿ ಮತ್ತೆ ನಿರುತ್ತರರಾಗಿದ್ದಾರೆ.
ಶನಿವಾರ ನಡೆದ ಮತ್ತೊಂದು ಹಣಾಹಣಿಯಲ್ಲಿ ಫ್ರಾನ್ಸ್‌ನ ಮ್ಯಾಥ್ಯೂಸ್ ರೋಯರ್ ಅವರನ್ನು ಬಗ್ಗುಬಡಿದು ಸತತ ಐದನೇ ನಾಕೌಟ್ ಜಯ ಸಾಧಿಸಿದ್ದಾರೆ.
ಸೂಪರ್ ಮಿಡ್ಲ್‌ವೈಟ್ ಆರು ಸುತ್ತುಗಳ ಸ್ಪರ್ಧೆಯಲ್ಲಿ ಐದನೇ ಸುತ್ತಿನಲ್ಲೇ ವಿಜೇಂದರ್ ಜಯಶಾಲಿಯಾಗಿದ್ದಾರೆ ಎಂದು ಘೋಷಿಸಲಾಯಿತು. ಇದುವರೆಗಿನ ಬೌಟ್‌ಗಳಲ್ಲಿ ಇದು ವಿಜೇಂದರ್ ಅವರ ಸುಧೀರ್ಘ ಬೌಟ್ ಆಗಿತ್ತು.
30 ವರ್ಷದ ಹೆಮ್ಮೆಯ ಭಾರತೀಯ ಅತ್ಯಂತ ಅನುಭವಿ ರೋಯರ್ ವಿರುದ್ಧ ಗೆಲುವು ಸಾಧಿಸಿರುವುದು ಐತಿಹಾಸಿಕ ಸಾಧನೆಯಾಗಿದೆ. ರೋಯರ್ ಈ ಸ್ಪರ್ಧೆಗೆ ಮುನ್ನ 250 ಸುತ್ತುಗಳ ಹೋರಾಟ ನಡೆಸಿದ ಅನುಭವ ಹೊಂದಿದ್ದಾರೆ. ಆದರೆ ಇದ್ಯಾವುದೂ ವಿಜೇಂದರ್ ಅವರ ಶಕ್ತಿಶಾಲಿ ಪಂಚ್‌ಗಳ ಮುಂದೆ ಪ್ರಯೋಜನಕ್ಕೆ ಬರಲಿಲ್ಲ.
ಮೊದಲ ಸುತ್ತಿನಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ರಾಯರ್, ತಮಗಿಂತ ಎತ್ತರದ ಎದುರಾಳಿಯ ಪಟ್ಟುಗಳಿಂದ ಪಾರಾಗುವ ಪ್ರಯತ್ನ ನಡೆಸಿದರು. ಆದರೂ ವಿಜೇಂದರ್ ಅವರ ಶಕ್ತಿಶಾಲಿ ಪಂಚ್‌ಗಳಿಂದ ಪಾರಾಗುವುದು ಸಾಧ್ಯವಾಗಲಿಲ್ಲ.
ಎರಡನೇ ಸುತ್ತಿನಲ್ಲೂ ಈ ಫ್ರಾನ್ಸ್ ಬಾಕ್ಸರ್ ಮೇಲೆ ವ್ಯಾಪಕ ದಾಳಿ ನಡೆಸಿದರು. ಶಕ್ತಿಶಾಲಿ ಪಂಚ್‌ನಿಂದ ತತ್ತರಿಸಿ, ರಕ್ತ ಸೋರುತ್ತಿದ್ದ ರೋಯರ್ ಭಾರತದ ಸ್ಪರ್ಧಿಗೆ ಸುಲಭದ ತುತ್ತಾಗುತ್ತಾರೆ ಎಂದು ಒಂದು ಹಂತದಲ್ಲಿ ಎಣಿಸಿದರೂ, ಕೊನೆಗೂ ಎಡಗಣ್ಣಿನ ಬಳಿ ಆಗಿದ್ದ ಗಾಯದ ನಡುವೆಯೂ ಪ್ರಬಲ ಹೋರಾಟ ನೀಡಿದರು. ಆದರೆ ಅಂತಿಮವಾಗಿ ರಕ್ತ ಸೋರಿಕೆ ಹೆಚ್ಚಿದ್ದರಿಂದ ಸ್ಪರ್ಧೆಯಲ್ಲಿ ಮುಂದುವರಿಯುವುದು ಫ್ರಾನ್ಸ್ ಬಾಕ್ಸರ್‌ಗೆ ಸಾಧ್ಯವಾಗಲಿಲ್ಲ.
ಮೇ 13ರಂದು ವಿಜೇಂದರ್ ತಮ್ಮ ಮುಂದಿನ ಎದುರಾಳಿಯ ವಿರುದ್ಧ ಸೆಣೆಸುವರು. ಆದರೆ ಇವರ ಎದುರಾಳಿ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.







