ಮಂಗಳೂರು: ಮಳೆಗಾಗಿ ವಿಶೇಷ ನಮಾಝ್

ಮಂಗಳೂರು, ಮೇ 1: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ (ಎಸ್ ಕೆ ಎಸ್ ಎಂ) ಕೇಂದ್ರೀಯ ಸಮಿತಿ ವತಿಯಿಂದ ಇಂದು ಬೆಳಗ್ಗೆ 8 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಮಳೆಗಾಗಿ ವಿಶೇಷ ನಮಾಝ್ ಮತ್ತು ಪ್ರಾರ್ಥನೆ ನಡೆಯಿತು.
ನಮಾಝ್ ನ ನೇತೃತ್ವವನ್ನು ನಂದಾವರ ಸಲಫಿ ಮಸೀದಿಯ ಖತೀಮ್ ಅಹ್ಮದ್ ಅಲಿ ಖಾಸಿಮಿ ನೆರವೇರಿಸಿದರು. ಎಸ್ ಕೆ ಎಸ್ ಎಂ ನ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್, ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್ ಹಾಗೂ ಎಸ್ ಕೆ ಎಸ್ ಎಂ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಸಂದರ್ಭ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಪುರುಷರ ಸಹಿತ ಮಹಿಳೆಯರೂ ಪಾಲ್ಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಅಹ್ಮದ್ ಅಲಿ ಖಾಸಿಮಿ ಕರಾವಳಿ ಪ್ರದೇಶದಲ್ಲಿ ನೀರು ದಾರಾಳವಾಗಿ ಸಿಗುವುದರಿಂದ ಹೆಚ್ಚಿನವರಿಗೆ ನೀರಿನ ಮಹತ್ವದ ಬಗ್ಗೆ ತಿಳಿದಿರುವುದಿಲ್ಲ "ಸಮುದ್ರದಲ್ಲಿ ಅಂಗಸ್ನಾನ (ವುಝೂ) ಮಾಡುವಾಗಲೂ ನೀರನ್ನು ವ್ಯರ್ಥ ಮಾಡಬಾರದು" ಎಂಬ ಪ್ರವಾದಿ ನುಡಿಯಿದೆ. ಆದ್ದರಿಂದ ನೀರಿನ ಮಹತ್ವವನ್ನು ಅರಿತು ಅದರ ವ್ಯರ್ಥ ಬಳಕೆ ಮಾಡದಂತೆ ಮನವಿ ಮಾಡಿದರು.
ಎಂ.ಜಿ. ಮುಹಮ್ಮದ್, ಅಬ್ಬಾಸ್ ಅಹ್ಮದ್ , ಮುಹಮ್ಮದ್ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.







