ಬಿಹಾರದಲ್ಲಿ ಮದ್ಯ ನಿಷೇಧವನ್ನು ಟೀಕಿಸಿದ ಕನ್ಹಯ್ಯಾ ಕುಮಾರ್...!
ಹುಟ್ಟೂರಿನಲ್ಲಿ ವಿದ್ಯಾರ್ಥಿ ನಾಯಕನಿಗೆ ನಾಗರಿಕರಿಂದ ಭವ್ಯ ಸ್ವಾಗತ

ಪಾಟ್ನಾ, ಮೇ ,1: ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಿರುವ ರಾಜ್ಯ ಸರಕಾರದ ಕ್ರಮವನ್ನು ದಿಲ್ಲಿ ಜೆಎನ್ ವಿ ವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೇಯ ಕುಮಾರ್ ಟೀಕಿಸಿದ್ದಾರೆ.
ರಾಷ್ಟ್ರವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದು ಹೊರಬಂದಿರುವ ಕನ್ಹೇಯ ಕುಮಾರ್ ಶನಿವಾರ ತನ್ನ ಹುಟ್ಟೂರು ಬಿಹಾರಕ್ಕೆ ಆಗಮಿಸಿದಾಗ ಅಲ್ಲಿನ ನಾಗರೀಕರು ಅವರಿಗೆ ಭವ್ಯ ಸ್ವಾಗತ ನೀಡಿದರು.
ಎರಡು ದಿನಗಳ ಭೇಟಿಗಾಗಿ ಬಿಹಾರಕ್ಕೆ ಆಗಮಿಸಿರುವ ಕನ್ಹೇಯ ಕುಮಾರ್ ಪಾಟ್ನಾ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಆಗಮಿಸುತ್ತಿದ್ದಂತೆ ಅವರನ್ನು ಆಡಳಿತ ಜನತಾ ದಳ (ಸಂಯುಕ್ತ) ವಕ್ತಾರ ನೀರಜ್ ಕುಮಾರ್ ಸ್ವಾಗತಿಸಿದರು. ಅವರಿಗೆ ಬೆಂಗಾವಲಿಗೆ ನೂರಾರು ಪೊಲೀಸರು, ಆಂಬುಲೆನ್ಸ್, ಮೋಟಾರ್ ಸೈಕಲ್ ಗಳಲ್ಲಿ ಕೆಂಪು ಧ್ವಜ ಹಿಡಿದ ನೂರಾರು ಯುವಕರು ಇದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ಹೇಯ ಕುಮಾರ್ ಅವರು ಮದ್ಯ ನಿಷೇಧಿಸಿರುವ ರಾಜ್ಯ ಸರಕಾರದ ಕ್ರಮವನ್ನು ಟೀಕಿಸಿದರು. "ಪ್ರಜಾಪ್ರಭುತ್ವದ ತತ್ವ, ಅಭಿವ್ಯಕ್ತಿ ಮತ್ತು ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದಂತಾಗುತ್ತದೆ ” ಎಂದು ಅವರು ಹೇಳಿದರು.
"ಒಂದು ರೀತಿಯಲ್ಲಿ ನೋಡಿದಾಗ ಬಿಹಾರದಲ್ಲಿ ಮದ್ಯ ನಿಷೇಧ ಒಳ್ಳೆಯದು, ಆದರೆ ಪ್ರಜಾಪ್ರಭುತ್ವದ ತತ್ವಗಳು, ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ಅವಕಾಶ ಇರುವ ಸಂದರ್ಭದಲ್ಲಿ ಸಂಪೂರ್ಣ ಮದ್ಯ ನಿಷೇಧ ಅಸಾಧ್ಯ ” ಎಂದು ಹೇಳಿದರು.





