ಹೆಸ್ಕಾಂ ನಿಂದ ಗ್ರಾಹಕರ ಕುಂದುಕೊರತೆ ಕುರಿತು ಚರ್ಚೆ

ಭಟ್ಕಳ, ಮೇ 1: ಹೆಸ್ಕಾಂ ಇಲಾಖೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಹೆಸ್ಕಾಂ ಕಚೇರಿಯ ಸಭಾ ಭವನದಲ್ಲಿ ಗ್ರಾಹಕರ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಅದೀಕ್ಷಕ ಇಂಜಿನಿಯರ್ ಕೃಷ್ಣಮೂರ್ತಿ ಅವರು ಗ್ರಾಹರ ಎಲ್ಲಾ ಪ್ರಶ್ನೆಗಳಿಗೂ ಸಹ ಸಮರ್ಪಕವಾದ ಉತ್ತರವನ್ನು ನೀಡಿದರು. ಗ್ರಾಹಕರೋರ್ವರು ಹೆಸ್ಕಾಂ ಚೆಕಿಂಗ್ ಸ್ಕಾಡ್ ಹೆಸರಿನಲ್ಲಿ ವಸೂಲಿ ನಡೆಯುತ್ತಿದೆ. ಯಾವುದೇ ತಪ್ಪಿಲ್ಲದಿದ್ದರೂ ಸಹ ಗ್ರಾಹಕರನ್ನು ಹೆಚ್ಚುವರಿ ಲೋಡ್ ನೆಪದಲ್ಲಿ ಹೆದರಿಸಿ ಅವರಿಂದ ಹಣ ಕೀಳುವ ದಂಧೆ ಮುಂದುವರಿದಿದೆ ಎಂದು ದೂರಿದರು. ಇದಕ್ಕುತ್ತರಿಸಿದ ಅವರು ಇಲಾಖೆಯದ್ದೇ ಜನರು ಎನ್ನುವ ಕುರಿತು ಅವರ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು. ಯಾರೋ ಬಂದು ಈ ರೀತಿಯಾಗಿ ಇಲಾಖೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಂದೆ ಯಾವುದೇ ಅಂತಹ ವ್ಯಕ್ತಿಗಳು ಬಂದಲ್ಲಿ ಅವರ ಗುರುತಿನ ಚೀಟಿಯನ್ನು ಮೊದಲು ಕೇಳಿ ಪಡೆಯಿರಿ ಹಾಗೂ ಅವರು ಬಂದಿದ್ದ ಜೀಪ್ ನಂಬ್ರವನ್ನು ಬರೆದುಕೊಂಡು ದೂರು ಕೊಡಿ ಎಂದರು.
ಕೃಷಿಕ ಸಮಾಜದ ಶ್ರೀಧರ ಹೆಬ್ಬಾರ್ ಅವರು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಸರಿಯಾಗಿ ನೀಡುವಂತೆ ಮನವಿ ಮಾಡಿದರು. ಭಟ್ಕಳದಲ್ಲಿ 110 ಕೆ.ವಿ.ಎ. ವಿದ್ಯುತ್ ಲೈನ್‌ನಲ್ಲಿ ತೊಂದರೆಯಾದರೆ ಪರ್ಯಾಯ ವ್ಯವಸ್ಥೇಯೇ ಇಲ್ಲವಾಗಿದೆ. ಇಲ್ಲಿಗೆ ಮಂಜೂರಿಯಾಗಿದ್ದ 110 ಕೆ.ವಿ.ಎ. ವಿದ್ಯುತ್ ಲೈನ್ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ವಿದ್ಯುತ್ ಮಂತ್ರಿಗಳಲ್ಲಿ ಒತ್ತಡ ಹೇರಿ ಕೂಡಾಲೇ ಕಾಮಗಾರಿ ಆರಂಭವಾಗುವಂತೆ ಮಾಡಬೇಕಾರಿಗೆ. ಭಟ್ಕಳದ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು 110 ಕೆ.ವಿ.ಎ. ಸ್ಟೇಶನ್ ಆರಂಭದಿಂದ ಎಲ್ಲವೂ ಸರಿ ಹೋಗಲಿದ್ದು ತಕ್ಷಣ ಇಲಾಖೆಯ ವತಿಯಿಂದ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕುತ್ತರಿಸಿದ ಕೃಷ್ಣಮೂರ್ತಿ ಅವರು ಹೆಸ್ಕಾಂ ಕೇವಲ ವಿದ್ಯುತ್ ಸರಬರಾಜನ್ನಷ್ಟೇ ಮಾಡುತ್ತದೆ. ವಿದ್ಯುತ್ ಸ್ಟೇಶನ್ ಇತ್ಯಾದಿಗಳನ್ನು ಕೆ.ಪಿ.ಟಿ.ಸಿ.ಎಲ್. ನಿರ್ವಹಿಸುತ್ತದೆ. ಸಾರ್ವಜನಿಕರು ಈ ಕುರಿತು ಒತ್ತಡ ಹೇರಿದರೆ ಅವರಿಂದ ಕೆಲಸ ಮಾಡಿಸಿಕೊಳ್ಳಬೇಕು ಎಂದರು.
ಭಟ್ಕಳದಲ್ಲಿ ಗ್ರಾಹಕರ ಸಭೆಯು ಯಾವುದೇ ಹೆಚ್ಚಿನ ದೂರುಗಳಿಲ್ಲದೇಯೇ ಮುಕ್ತಾಯವಾಗಿದ್ದು ವಿಶೇಷವಾಗಿತ್ತು. ಕೇವಲ ಸಣ್ಣಪುಟ್ಟ ದೂರುಗಳು ಹಾಗೂ ವಯಕ್ತಿಕ ನೆಲೆಯಲ್ಲಿನ ದೂರುಗಳನ್ನು ಬಿಟ್ಟರೆ ಇನ್ನಾವುದೇ ಹೆಚ್ಚಿನ ದೂರುಗಳು ಅಧಿಕಾರಿಗಳ ಎದುರು ಬಾರದಿರುವುದನ್ನು ಕಂಡ ಅಧಿಕಾರಿಗಳೂ ಕೂಡಾ ಭಟ್ಕಳ ಉಪವಿಭಾಗದ ಉತ್ತಮ ಕಾರ್ಯವೈಖರಿಗೆ ಸಂತಸ ಪಟ್ಟರು. ಈ ಸಂದರ್ಭದಲ್ಲಿ ಕಾರವಾರದ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ಬಿ. ಇಡೂರ್‌ಕರ್, ಸಹಾಯಕ ಕಾರ್ಯನಿರ್ವಾಹ ಇಂಜಿನಿಯರ್ ಆರ್. ಎನ್. ಭಟ್ಟ, ಭಟ್ಕಳದ ಸ.ಕಾ.ನಿ. ಇಂಜಿನಯರ್ ಕೆ.ಜಿ. ಮಂಜುನಾಥ, ಹೆಸ್ಕಾಂ ಸಲಹಾ ಸಮಿತಿ ಸದಸ್ಯೆ ದೇವಿ ತಿಮ್ಮಪ್ಪ ಗೊಂಡ, ಲಚ್ಮಯ್ಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.







