ಅಮೆರಿಕದ ಮೆರಿಲ್ಯಾಂಡ್ ಚುನಾವಣೆ: ಭಾರತ ಮೂಲದ ಮುಸ್ಲಿಂ ಯುವತಿ ಜಯ
ವಾಷಿಂಗ್ಟನ್, ಮೇ 1: ಅಮೆರಿಕದ ಮೆರಿಲ್ಯಾಂಡ್ ಸ್ಟೇಟ್‌ನಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಭಾರತ ಮೂಲದ 22ರ ಮುಸ್ಲಿಂ ಯುವತಿ ಅಚ್ಚರಿಯ ಫಲಿತಾಂಶ ನೀಡಿದ್ದಾಳೆ.
ಹಿರಿಯ ರಾಜಕಾರಣಿ ಜೇನಾ ಜಾಕೋಬ್ ಅವರನ್ನು ಸೋಲಿಸಿದ ರಹೀಲಾ ಅಹ್ಮದ್ ಅಚ್ಚರಿಯ ಫಲಿತಾಂಶ ದಾಖಲಿಸಿದ್ದಾತೆ. ರಹೀಲಾ 9624 ಮತ ಪಡೆದರೆ, ಜೇನಾ 6004 ಮತಗಳಿಗೆ ತೃಪ್ತರಾದರು. ಬೋರ್ಡ್ ಆಫ್ ಎಜ್ಯುಕೇಶನ್ ಡಿಸ್ಟ್ರಿಕ್ಟ್-5ನ ಪ್ರಾಥಮಿಕ ಚುನಾವಣೆ ಇದಾಗಿತ್ತು.
ಈಕೆ ಹಾಗೂ 8072 ಮತಗಳೊಂದಿಗೆ ಎರಡನೇ ಸ್ಥಾನ ಗಳಿಸಿದ ಚೆರಿಲ್ ಲಾಂಡಿಸ್, ಮುಂದಿನ ನವೆಂಬರ್‌ನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಸಂಪಾದಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮುಸ್ಲಿಂ ವಿರೋಧಿ ನಿಲುವುಗಳನ್ನು ಅಭಿವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಮುಸ್ಲಿಂ ಯುವತಿಯ ಗೆಲುವಿಗೆ ವಿಶೇಷ ಮಹತ್ವವಿದೆ.
"ಟ್ರಂಪ್ ಅಭಿಪ್ರಾಯಗಳು ಅಮೆರಿಕನ್ ಜನಸಮುದಾಯದ ಅಭಿಪ್ರಾಯದ ಪ್ರತಿಫಲನವಾಗಿದ್ದರೆ, ಈ ಚುನಾವಣೆಯಲ್ಲಿ ಗೆಲ್ಲುವುದು ನನಗೆ ಸಾಧ್ಯವೇ ಇರಲಿಲ್ಲ. ನನ್ನ ಜಿಲ್ಲೆಯಲ್ಲಿ 56 ಸಾವಿರ ಮತಗಳಿದ್ದು, ಈ ಪೈಕಿ ಮುಸ್ಲಿಂ ಮತದಾರರು ಶೇಕಡ ಒಂದಕ್ಕಿಂತಲೂ ಕಡಿಮೆ. ಟ್ರಂಪ್ ರಾಜಕೀಯ ಕಾರಣಗಳಿಗಾಗಿ ಮುಸ್ಲಿಮರನ್ನು ವಿರೋಧಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಅಮೆರಿಕದ ವೈವಿಧ್ಯತೆಯೇ ದೇಶದ ಬಲ ಎನ್ನುವ ತತ್ವದ ಮೇಲೆ ನಂಬಿಕೆ ಇರಿಸಿಕೊಂಡವಳು ನಾನು" ಎಂದು ವಿವರಿಸಿದರು.
2012ರ ಚುನಾವಣೆಯಲ್ಲಿ ಶೇಕಡ 3ರಷ್ಟು ಮತಗಳಿಂದ ಸೋತಿದ್ದ ಈಕೆ, ಮುಂದಿನ ಕೆಲ ತಿಂಗಳುಗಳಲ್ಲಿ ಎಲ್ಲ ವರ್ಗದವರ ಮನವೊಲಿಸಲೂ ಯೋಜನೆ ರೂಪಿಸಿರುವುದಾಗಿ ಹೇಳಿದ್ದಾರೆ. ತಳಮಟ್ಟದ ಪ್ರಚಾರಕ್ಕೆ ಒತ್ತು ನೀಡುವುದೇ ನನ್ನ ಸ್ಪರ್ಧೆಗೆ ಬಲ ನೀಡುವ ವಿಚಾರ ಎಂದು ಅವರು ಹೇಳಿದ್ದಾರೆ.
ಹೈದ್ರಾಬಾದ್‌ನಲ್ಲಿ ತಂತ್ರಜ್ಞಾನ ಉದ್ಯಮಿಯಾಗಿದ್ದ ಇವರ ತಂದೆ 25ರ ಯುವಕನಾಗಿದ್ದಾಗಲೇ ಅಮೆರಿಕಕ್ಕೆ ವಲಸೆ ಹೋಗಿದ್ದರು. ರಹೀಲಾಗೆ ಐದು ವರ್ಷವಿದ್ದಾಗ, ತಾಯಿ ಪಾಕಿಸ್ತಾನದಿಂದ ಅಮೆರಿಕಕ್ಕೆ ವಲಸೆ ಬಂದಿದ್ದರು.







