ಮಹಿಳೆ ಆತ್ಮಹತ್ಯೆ: ಪೊಲೀಸ್ ಠಾಣಾಧಿಕಾರಿ ಬಂಧನ
ಪ್ರಿಯಕರನ ತಪ್ಪಿಗೆ ಪ್ರೇಯಸಿಗೆ ಶಿಕ್ಷೆ

ಹೊಸದಿಲ್ಲಿ, ಮೇ 1: ತಲೆ ಮರೆಸಿಕೊಂಡ ಅಪರಾಧಿಯ ಪ್ರೇಯಸಿಯನ್ನು ಬಂಧಿಸಿ ಕಿರುಕುಳ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣರಾದ ಆರೋಪದಲ್ಲಿ ಪೊಲೀಸ್ ಠಾಣಾಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ತಿಸ್ ಹಜಾರಿ ನ್ಯಾಯಾಲಯ ಆವರಣದ ಹೊರಗೆ ಈ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ವಿಜಯ್ ವಿಹಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಅವರ ಕಿರುಕುಳ ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ 33 ವರ್ಷದ ಮಹಿಳೆ ಆತ್ಮಹತ್ಯೆ ಟಿಪ್ಪಣಿ ಬರೆದಿಟ್ಟ ಹಿನ್ನೆಲೆಯಲ್ಲಿ ದಿನೇಶ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಕೋರ್ಟ್‌ನಲ್ಲಿ ಅರ್ಜಿ ನಮೂನೆ ಪಡೆಯಲು ಬಂದಿದ್ದ ಮಹಿಳೆ 2.45ಕ್ಕೆ ಕೋರ್ಟ್ ಆವರಣದಿಂದ ಹೊರಬಂದು ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದರು. ಪೊಲೀಸರು ಅರುಣ್ ಆಸಿಫ್ ಅಲಿ ಆಸ್ಪತ್ರೆಗೆ ಸೇರಿಸಿದರೂ ಆಕೆ ಮೃತಪಟ್ಟಳು, ತಕ್ಷಣ ಠಾಣಾಧಿಕಾರಿಯನ್ನು ಬಂಧಿಸಲಾಯಿತು. ಈ ಮಧ್ಯೆ ಖಾಸಗಿ ಟಿವಿ ವಾಹಿನಿಗಳಿಗೆ ಅನಾಮಧೇಯ ಸಂಖ್ಯೆಯಿಂದ ಕರೆ ಬಂದು, ಆತ್ಮಹತ್ಯೆಯ ಲೈವ್ ದೃಶ್ಯಾವಳಿ ಸೆರೆಹಿಡಿಯುವಂತೆ ಮನವಿ ಮಾಡಲಾಯಿತು ಎನ್ನುವ ಅಂಶ ಕೂಡಾ ವಿವಾದಕ್ಕೆ ಕಾರಣವಾಗಿದೆ.
ಈ ಮಹಿಳೆ 2005ರಲ್ಲೂ ಇಂಥದ್ದೇ ಆತ್ಮಹತ್ಯೆ ಪ್ರಯತ್ನ ಮಾಡಿದ್ದಳು. ಈ ಮೂಲಕ ಮಾಜಿ ಪತಿಯನ್ನು ಕೊಲೆ ಯತ್ನ ಪ್ರಕರಣದಲ್ಲಿ ಸಿಲುಕಿಸಿದ್ದಳು. ಗಂಡ ಜೈಲಿನಲ್ಲಿದ್ದಾಗ ಭಾವಂದಿರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಳು. ಅದು ಸುಳ್ಳು ಎಂದು ಸಾಬೀತಾದ ಬಳಿಕ 2013ರಲ್ಲಿ ಮತ್ತೊಂದು ದೂರು ದಾಖಲಿಸಿದಳು.







