ಕನ್ಹಯ್ಯಗೆ ಕಪ್ಪುಬಾವುಟ ಪ್ರದರ್ಶಿಸಿದ ವ್ಯಕ್ತಿಗೆ ಗೂಸಾ

ಪಾಟ್ನಾ: ಜೆಎನ್‌ಯು ವಿವಾದದ ಬಳಿಕ ಮೊಟ್ಟಮೊದಲ ಬಾರಿಗೆ ತವರು ರಾಜ್ಯಕ್ಕೆ ಆಗಮಿಸಿದ ಕನ್ಹಯ್ಯೆಕುಮಾರ್ ಭಾಷಣ ಮಾಡುತ್ತಿದ್ದ ಸಭೆಯಲ್ಲಿ ಆತನಿಗೆ ಕಪ್ಪುಬಾವುಟ ಪ್ರದರ್ಶಿಸಿದ ವ್ಯಕ್ತಿಯನ್ನು ಕನ್ಹಯ್ಯಿ ಬೆಂಬಲಿಗರು ಥಳಿಸಿದ್ದರಿಂದ ಸಭೆಯಲ್ಲಿ ಗದ್ದಲ- ಕೋಲಾಹಲ ಉಂಟಾಯಿತು.
ಕನ್ಹಯ್ಯಕುಮಾರ್ ಭಾಷಣಕ್ಕೆ ಅಡ್ಡಿಪಡಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಬೆಗುಸರಾಯ್ ಜಿಲ್ಲೆಯವರಾದ ಕನ್ಹಯ್ಯಾ ತಮ್ಮ ತವರು ರಾಜ್ಯಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿ, ವಾರಾಂತ್ಯದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬಿಹಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ಹಯ್ಯೆ, "ನಾನು ಇಲ್ಲಿ ರಾಜಕೀಯ ಸಭೆ ನಡೆಸಲು ಬಂದಿಲ್ಲ. ನನ್ನ ಆಲೋಚನೆಗಳನ್ನು ಜನರಿಗೆ ತಲುಪಿಸುವ ಸಲುವಾಘಿ ಬಂದಿದ್ದೇನೆ. ನಾನು ಏನು ಬಯಸಿದ್ದೇನೆ ಹಾಗೂ ನನ್ನ ನಿಲುವು ಏನು ಎನ್ನುವುದನ್ನು ಬಿಹಾರದ ಜನತೆ ಅರ್ಥ ಮಾಡಿಕೊಳ್ಳುತ್ತಾರೆ" ಎಂದು ಹೇಳಿದ್ದರು.
ಕಳೆದ ಫೆಬ್ರುವರಿಯಲ್ಲಿ ದೇಶದ್ರೋಹ ಆರೋಪದ ಮೇಲೆ ಬಂಧಿತರಾಗಿದ್ದ ಕನ್ಹಯ್ಯೋ ಕುಮಾರ್‌ಗೆ ದೆಹಲಿ ಹೈಕೋರ್ಟ್ ಮಾರ್ಚ್‌ನಲ್ಲಿ ಆರು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು.
ಫೆಬ್ರವರಿಯಲ್ಲಿ ನಡೆದ ಅಫ್ಜಲ್ ಗುರು ಪರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಕಳೆದ ಸೋಮವಾರ ವಿಶ್ವವಿದ್ಯಾನಿಲಯ ಅಧಿಕಾರಿಗಳು ಕನ್ಹಯ್ಯಾ ಕುಮಾರ್‌ಗೆ 10 ಸಾವಿರ ರೂಪಾಯಿ ದಂಡ ವಿಧಿಸಿ, ಇತರ ಮೂವರನ್ನು ಹೊರಹಾಕಿದ್ದರು. ಇದರ ವಿರುದ್ಧ ಕನ್ಹಯ್ಯಾ ಮತ್ತು ಇತರ 10 ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.





