ಬಿಪಾಶಾ- ಕರಣ್ ವಿವಾಹಕ್ಕೆ ಬಾಲಿವುಡ್ ದಂಡು ಸಾಕ್ಷಿ

ಮುಂಬೈ: ಶನಿವಾರ ರಾತ್ರಿ ನಗರದ ಹೊರವಲಯದ ತಾರಾ ಹೋಟೆಲ್‌ನಲ್ಲಿ ನಡೆದ ಬಿಪಾಶಾ ಬಸು- ಕರಣ್ ಸಿಂಗ್ ಗ್ರೋವರ್ ಅದ್ದೂರಿ ವಿವಾಹ ಔತಣಕೂಟಕ್ಕೆ ಬಾಲಿವುಡ್‌ನ ಖ್ಯಾತನಾಮರು ಸಾಕ್ಷಿಯಾದರು.
ಅಮಿತಾಬ್ ಬಚ್ಚನ್, ಶಾ ರೂಖ್ ಖಾನ್, ಐಶ್ವರ್ಯ ರೈ ಬಚ್ಚನ್, ಸುಷ್ಮಿತಾ ಸೆನ್, ರಣಬೀಬ್ ಕಪೂರ್ ಸೇರಿದಂತೆ ಇಡೀ ತಾರಾಮಂಡಲ ಅಲ್ಲಿ ಕಂಗೊಳಿಸುತ್ತಿತ್ತು. ಆದರೆ ಬಿಪಾಶಾ ಅವರ ಸಹ ತಾರೆ ಸಲ್ಮನ್ ಖಾನ್ ಹೊಸ ಜೋಡಿಯ ವಿಶೇಷ ಗಮನ ಸೆಳೆದರು.
ಚಿನ್ನದ ಬಣ್ಣದ ಲೆಹೆಂಗಾ ಗೌನ್‌ನಲ್ಲಿ ಬಿಪಾಶಾ ಕಂಗೊಳಿಸಿದರೆ, ಪತಿ ಕರಣ್ ದಂತ ಬಣ್ಣದ ಟುಕ್ಸೆಡೊದೊಂದಿಗೆ ಮಿಂಚಿದರು. ಪಂಜಾಬಿ ಹಾಗೂ ಬೆಂಗಾಲಿ ಸಂಪ್ರದಾಯದಂತೆ ಈ ವಿವಾಹ ಸಂತೋಷಕೂಟ ನಡೆಯಿತು. ವಿವಾಹ ವಿಧಿವಿಧಾನಗಳಲ್ಲಿ ಕುಟುಂಬ ವರ್ಗ ಹಾಗೂ ಆಪ್ತ ವಲಯವಷ್ಟೇ ಹಾಜರಿದ್ದರೂ, ಔತಣಕೂಟದಲ್ಲಿ ಬಾಲಿವುಡ್ ಹಾಗೂ ಟಿವಿ ಷೋ ತಾರಾಗಣ ತುಂಬಿಕೊಂಡಿತ್ತು,.
ಸಂಜಯ್ ದತ್, ಪತ್ನಿ ಮನ್ಯುತಾ ಜತೆ ಸತ್ಕಾರಕೂಟದಲ್ಲಿ ಪಾಲ್ಗೊಂಡರು. ಸೋನಮ್ ಕಪೂರ್, ಟಬು, ದಿಯಾ ಮಿರ್ಜಾ, ಅಬ್ಬಾಸ್ ಮುಸ್ತಾನ್ ನಿರ್ದೇಶಕದ್ವಯರು, ರೋಹಿತ್ ಶೆಟ್ಟಿ, ರಿತೇಶ್ ದೇಶಮುಖ್, ರಿತೇಶ್ ಗರ್ಭಿಣಿಪತ್ನಿ ಗೆನೆಲಿಯಾ, ಮಧುವನ್ ಹಾಗೂ ಸರಿತಾ, ಮಧೂರ್ ಬಂಡಾರ್ಕರ್, ನೀಲ್ ನಿತಿನ್ ಮುಖೇಶ್, ನೇಹಾ ದೂಪಿಯಾ, ಸ್ನೇಹಿತೆ ಅನುಷಾ ದಂಡೇಕರ್ ಜತೆ ಕರಣ್ ಕುಂದ್ರಾ, ಬಿಪಾಶಾ ಬಸು ಅವರ ಮಾಜಿ ಪ್ರಿಯಕರ ದಿನೊ ಮೊರೆಯಾ ಹೀಗೆ ಪಟ್ಟಿ ಬೆಳೆಯುತ್ತದೆ. ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ ನಾದಿನಿ ಸುಷ್ಮಿತಾ ಶೆಟ್ಟಿ ಜತೆ ಕಾಣಿಸಿಕೊಂಡರು. ಪೂರ್ವನಿಗದಿ ಕಾರ್ಯಕ್ರಮದಿಂದಾಗಿ ಶಿಲ್ಪಾ ಶೆಟ್ಟಿ ಗೈರುಹಾಜರಾಗಿದ್ದರು.
ಬಿಳಿ ಹಾಗೂ ಗುಲಾಬಿ ಬಣ್ಣದ ವೆಡ್ಡಿಂಗ್ ಕೇಕನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. ಎರಡು ಮಂಗಗಳು ಪರಸ್ಪರ ಸಲ್ಲಾಪದಲ್ಲಿ ತೊಡಗಿರುವಂತೆ ರೂಪಿಸಲಾಗಿತ್ತು. ಮದುವೆಗೆ ಬಿಪಾಶಾ ಚಿನ್ನದ ಬಣ್ಣದ ಸವ್ಯಸಾಚಿ ಲೆಹಂಗಾ ಸೀರೆ ಹಾಗೂ ಕರಣ್ ಸಾಂಪ್ರದಾಯಿಕ ಬೆಂಗಾಲಿ ವರ ಉಡುಗೆಯೊಂದಿಗೆ ಮಿಂಚಿದರು.





