ಮಂಜೇಶ್ವರ ಕ್ಷೇತ್ರದಲ್ಲಿ ಸಿಪಿಎಂಗೆ ಜಯ ಖಚಿತ: ಸಿ.ಎಚ್. ಕುಂಞಾಮು
ಕೇರಳ ವಿಧಾನಸಬಾ ಚುನಾವಣೆ

ಮಂಜೇಶ್ವರ, ಮೇ 1: ಮಂಜೇಶ್ವರ ವಿಧಾನಸಬಾ ಕ್ಷೇತ್ರದಲ್ಲಿ ಈ ಬಾರಿ ಸಿಪಿಎಂಗೆ ಗೆಲುವು ಖಚಿತ, ವಿರೋಧ ಪಕ್ಷದವರ ಅಪಪ್ರಚಾರ ನಮ್ಮ ಗೆಲುವಿಗೆ ಯಾವುದೇ ಅಡ್ಡಿಯಾಗದು ಎಂದು ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸಿ.ಎಚ್. ಕುಂಞಾಮು ಹೇಳಿದ್ದಾರೆ.
ಬಾಯಾರು ಪದವಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಿಪಿಎಂ ಮಂಜೇಶ್ವರ ಕ್ಷೇತ್ರಕ್ಕೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ. ಕಳೆದ ಸಿಪಿಎಂ ಆಡಳಿತದಲ್ಲಿ ಕ್ಷೇತ್ರದ ಹಳ್ಳಿ ಹಳ್ಳಿಗೂ ರಸ್ತೆ ಸಂಪರ್ಕ ಸಹಿತ ರಸ್ತೆಯ ಅಭಿವೃದ್ದಿ ಮಾಡಲಾಗಿತ್ತು. ಹಲವು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ, ವಿದ್ಯುತ್ ಪೂರೈಕೆ ಸಹಿತ ಅಗತ್ಯವಾದ ಜನಸೇವೆಯನ್ನು ನಾವು ಮಾಡಿದ್ದೇವೆ. ಆದರೆ ಬಿಜೆಪಿ ಹಾಗೂ ಮುಸ್ಲಿಂ ಲೀಗ್ ಪಕ್ಷಗಳು ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ಈ ಹಿಂದೆ ಪಕ್ಷದ ವರಿಷ್ಠ ಸುಬ್ಬರಾವ್ ಶಾಸಕರಾಗಿದ್ದ ವೇಳೆ ಕ್ಷೇತ್ರದಲ್ಲಿ ಹೊಸ ಅಭಿವೃದ್ದಿ ಶಕೆ ಆರಂಭಗೊಂಡಿತ್ತು. 2006ರಲ್ಲಿ ತುಳು ಅಕಾಡೆಮಿ, ಮಾಪಿಳ್ಳೆ ಅಕಾಡೆಮಿ, ಯಕ್ಷಗಾನ ಕೇಂದ್ರದ ಸ್ಥಾಪನೆ ಸಹಿತ ಮರಿಟೈಮ್ ಕಾಲೇಜು ಕಾರ್ಯಾಚರಿಸುತಿತ್ತು. ಆದರೆ ಹಾಲಿ ಶಾಸಕರು ಮರಿಟೈಮ್ ಕಾಲೇಜು ತಾಲೂಕಿಗೆ ಅಗತ್ಯವಿಲ್ಲ ಎನ್ನುವ ಕಾರಣ ನೀಡಿ ಎತ್ತಂಗಡಿ ಮಾಡಿಸಿದ್ದಾರೆ. ಮುಜುಂಗಾವು ಪ್ರದೇಶವನ್ನು ಕೇಂದ್ರೀಕರಿಸಿ ಆರಂಭಿಸಲು ಉದ್ದೇಶಿಸಿದ್ದ ಯಕ್ಷಗಾನ ಕಲಾ ಕೇಂದ್ರ ಕುಡುಕರ ಅಡ್ಡೆಯಾಗಿ ಮಾರ್ಪಾಡಾಗಿದೆ. ಮಾಪಿಳ್ಳೆ ಅಕಾಡೆಮಿ ಹಾಗೂ ತುಳು ಅಕಾಡೆಮಿ ಕಾರ್ಯಗಳನ್ನು ಶಾಸಕರು ಇಲ್ಲವಾಗಿಸಿದ್ದಾರೆ ಎಂದು ಆರೋಪಿಸಿದರು.
ಸಾಂಸ್ಕೃತಿಕ ಹಾಗೂ ಚಾರಿತ್ರಿಕವಾಗಿ ಹಲವು ವಿಶೇಷತೆಗಳನ್ನು ಒಳಗೊಂಡ ಮಂಜೇಶ್ವರ ಕ್ಷೇತ್ರದ ಪ್ರಗತಿಗೆ ಸಿಪಿಎಂ ಬೆಂಬಲಿಸುವುದು ಅಗತ್ಯ. ಐವತ್ತು ವರ್ಷಗಳ ಅಸ್ತಿತ್ವವಿರುವ ಮಂಜೇಶ್ವರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಮಲ ಅರಳುವ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಈ ಕ್ಷೇತ್ರದಲ್ಲಿ ಜಾತ್ಯಾತೀತ ನೆಲೆಗಟ್ಟಿಗೆ ತೊಡಕಾಗುವ ಪಕ್ಷಕ್ಕೆ ಜಯ ಅಸಾಧ್ಯ ಎಂದರು.
ಸಭೆಯಲ್ಲಿ ಶಂಕರ ರೈ ಮಾಸ್ತರ್, ರಾಮಚಂದ್ರ ಮಾಸ್ತರ್, ಬೇಬಿ ಶೆಟ್ಟಿ , ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ, ಹಿರಿಯ ಸಿಪಿಎಂ ಧುರೀಣ ಕುರುವೇರಿ ನಾರಾಯಣ ಭಟ್ ಮತ್ತಿತರರು ಭಾಗವಹಿಸಿದ್ದರು







