ಸೆಪ್ಟಿಕ್ ಟ್ಯಾಂಕ್‌ನಲ್ಲಿ ಏಳು ವರ್ಷದ ಬಾಲಕಿ ಜೀವಂತ ಸಮಾಧಿ

ಚೆನ್ನೈ: ಏಳು ವರ್ಷದ ಮಗು ಮನೆ ಬಳಿಯ ಕೊಚ್ಚೆಗುಂಡಿಗೆ ಬಿದ್ದುದನ್ನು ಗಮನಿಸದೇ, ಅದಕ್ಕೆ ಮರಳು ತುಂಬಿ ತಂದೆ- ತಾಯಿಯೇ ಪುಟ್ಟ ಬಾಲಕಿಯ ಜೀವಂತ ಸಮಾಧಿಗೆ ಕಾರಣವಾದ ಹೃದಯ ವಿದ್ರಾವಕ ಘಟನೆ ಮದುರವೋಯಲ್ ಸಮೀಪದ ವನಗರಾಮ ಎಂಬಲ್ಲಿ ನಡೆದಿದೆ.
ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಮಗುವಿನ ನೀರಿನ ಬಾಟಲಿಯನ್ನು ಕಂಡು ಮಗು ರೋಹಿತಾ ಆ ಗುಂಡಿಗೆ ಬಿದ್ದಿರಬೇಕು ಎಂಬ ಅನುಮಾನದಿಂದ ಮರಳನ್ನು ಹೊರತೆಗೆದಾಗ ಬಾಲಕಿಯ ಶವ ಪತ್ತೆಯಾಯಿತು. ಎರಡನೇ ತರಗತಿಯಲ್ಲಿ ಓದುತ್ತಿದ್ದ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ವನಗರಾಮ ಪ್ರದೇಶದ ನಿವಾಸಿಗಳಿಗೆ ಮೆಟ್ರೊವಾಟರ್ ಸಂಸ್ಥೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ಬಳಿಕ ರೋಹಿತಾ ತಂದೆ ಶಿವಕುಮಾರ್ ಹಾಗೂ ತಾಯಿ ಆನಂದಿ ತಮ್ಮ ಮನೆಯ ಕೊಚ್ಚೆಗುಂಡಿ (ಸೆಪ್ಟಿಕ್ ಟ್ಯಾಂಕ್) ಮುಚ್ಚಲು ನಿರ್ಧರಿಸಿದರು. ಕೆಲ ದಿನಗಳ ಹಿಂದೆ ಮಕ್ಕಳು ಇದಕ್ಕೆ ಬೀಳದಂತೆ ಕಬ್ಬಿಣದ ಮುಚ್ಚಳವನ್ನೂ ಮುಚ್ಚಿದ್ದರು. ಶನಿವಾರ ಅದಕ್ಕೆ ಮರಳು ತುಂಬುವ ಸಲುವಾಗಿ ಆ ಮುಚ್ಚಳ ತೆರೆದಿದ್ದರು.
ಬೆಳಿಗ್ಗೆ ಮಗು ಒಂದು ಬಾಟಲಿಯಲ್ಲಿ ಸೋಪಿನ ನೀರಿನಿಂದ ಗುಳ್ಳೆಗಳನ್ನು ಮಾಡುತ್ತಾ ಓಡಾಡಿಕೊಂಡು ಇದ್ದುದನ್ನು ಅಕ್ಕಪಕ್ಕದವರು ಗಮನಿಸಿದ್ದಾರೆ. ಬಹುಶಃ ಆಟವಾಡುವ ವೇಳೆ ಆಕೆ ಗುಂಡಿಯೊಳಕ್ಕೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಮಗು ಬಿದ್ದುದನ್ನು ಗಮನಿಸದೇ ಮರಳು ತುಂಬಿದ್ದರಿಂದ ಈ ದುರಂತ ಸಂಭವಿಸಿರಬೇಕು ಎಂದು ಶಂಕಿಸಿದ್ದಾರೆ.





