ಚೀನಾ ಅಮೆರಿಕವನ್ನು ಬಲಾತ್ಕರಿಸುತ್ತಿದೆ!: ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್, ಮೆ 2: ಅಮೆರಿಕ ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ ಆಕಾಂಕ್ಷಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚೀನಾದ ವಿರುದ್ಧ ಕಿಡಿಕಾರಿದ್ದಾರೆ. ಚೀನಾದೊಂದಿಗೆ ಅಮೆರಿಕದ ವ್ಯಾಪಾರ ಸಂಬಂಧದಲ್ಲಾದ ಹಿನ್ನಡೆಯನ್ನು ಮುಂದಿಟ್ಟು ಅವರು ತಾನು ಅಧ್ಯಕ್ಷನಾದರೆ ಚೀನಾವನ್ನು ಹದ್ದು ಬಸ್ತಿನಲ್ಲಿಡುವುದಾಗಿ ಹೇಳಿದ್ದಾರೆ. ಚೀನಾ ಅಮೆರಿಕವನ್ನು ಅದೆಷ್ಟು ಸಮಯದಿಂದ ಬಲಾತ್ಕಾರ ಮಾಡುತ್ತಿದೆ. ಅದಿನ್ನು ಹೆಚ್ಚು ಸಮಯ ಮುಂದುವರಿಯುವುದಿಲ್ಲ ಎಂದು ಗುಡುಗಿದ್ದಾರೆ. ಟ್ರಂಪ್ ಇಂಡಿಯಾನದಲ್ಲಿ ರ್ಯಾಲಿಯನ್ನು ಉದ್ಧೇಶಿಸಿ ಮಾತಾಡುತ್ತಿದ್ದ ಟ್ರಂಪ್ ಚೀನಾದ ವಿರುದ್ಧ ವಾಗ್ದಾಳಿಗಿಳಿದು "ನಾವು ಚೀನಾಕ್ಕೆ ಅಮೆರಿಕವನ್ನು ಬಲಾತ್ಕರಿಸಲು ಅನುಮತಿ ನೀಡುವಂತಿಲ್ಲ. ಅವರು ನಮ್ಮೊಂದಿಗೆ ಏನು ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಆಗಾಗ ಚೀನಾದ ವಿರುದ್ಧ ಉರಿದು ಬೀಳುತ್ತಿರುವ ಟ್ರಂಪ್ ಚೀನಾ ಅಮೆರಿಕದ ವ್ಯಾಪಾರದ ಹತ್ಯೆ ನಡೆಸುತ್ತಿದೆ.ಚೀನಾ ಮತ್ತು ಅಮೆರಿಕದ ಸಂಬಂಧ ರೇಪ್ ಮಾಡುವವ ಮತ್ತು ರೇಪ್ ಪೀಡಿತರದ್ದಾಗಿದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
"ನಾನು ಚೀನಾದೊಂದಿಗಿನ ಸಂಬಂಧ ಕುರಿತು ಕೋಪದಲ್ಲಿಲ್ಲ ಬದಲಾಗಿ ಅಮೆರಿಕದ ನಾಯಕರು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಮತ್ತು ಅವರು ನಕಾರಾತ್ಮಕವಾಗಿದ್ದಾರೆ" ಎಂದಿರುವ ಟ್ರಂಪ್ ನಾವು ಎಲ್ಲಕಡೆಯಿಂದ ಹಿಂದುಳಿದಿದ್ದೇವೆ. ಆದರೆ ನಮ್ಮ ಬಳಿ ಕಾರ್ಡ್ಸ್ ಇದೆ ಎಂಬುದನ್ನು ಮರೆಯಬಾರದು. ನಮ್ಮ ಬಳಿ ಚೀನಾಕ್ಕಿಂತ ಹೆಚ್ಚು ಸಾಮರ್ಥ್ಯವಿದೆ ಎಂದು ಅವರು ಗುಡುಗಿದ್ದಾರೆಂದು ವರದಿಯಾಗಿದೆ.







