ಐದು ವರ್ಷಗಳ ಬಳಿಕ ಒಸಾಮ ಬಿನ್ ಲಾದನ್ ಹತ್ಯಾ ದಾಳಿಯ ‘ನೇರ ಪ್ರಸಾರ’ ಮಾಡಿದ ಸಿ ಐ ಎ !

ವಾಷಿಂಗ್ಟನ್, ಮೇ 2: ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ರೂವಾರಿ ಒಸಾಮ ಬಿನ್ ಲಾಡೆನ್ ಹತ್ಯೆಯಾಗಿ ಐದು ವರ್ಷಗಳ ನಂತರ ಸಿ ಐ ಎ ಈ ದಾಳಿಯ ‘ನೇರ ಟ್ವೀಟ್’ ಮಾಡಿದೆ. ಪಾಕಿಸ್ತಾನದಲ್ಲಿ ಅಲ್-ಖೈದಾ ಸ್ಥಾಪಕನಿದ್ದ ಮನೆಯ ಕಂಪೌಂಡಿನಲ್ಲಿ ಅಮೆರಿಕಾದ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯನ್ನು ನಿಮಿಷ ನಿಮಿಷ ಮಾಹಿತಿಯನ್ನು ಈ ಟ್ವೀಟುಗಳು ನೀಡಿವೆ.
ಯುಬಿಎಲ್ ಎಂಬ ಹ್ಯಾಶ್ ಟ್ಯಾಗ್ ದೊಂದಿಗೆ ಟ್ವೀಟ್ ಮಾಡಿದ ಸಿ ಐ ಎ ಮೇ 2011ರ ದಾಳಿಯು ನಿಜವಾಗಿಯೂ ನಡೆಯುತ್ತಿದೆಯೇನೋ ಎಂಬಂತೆ ಸರಣಿ ಟ್ವೀಟ್ ಮಾಡಿ ಸಾಕಷ್ಟು ಕುತೂಹಲ ಮೂಡಿಸಿದೆ.
‘‘ಅಬ್ಬೊಟ್ಟಬಾದ್ ನಲ್ಲಿ ನಡೆದ ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆಯ 5ನೇ ವಾರ್ಷಿಕ ಮಹೋತ್ಸವದ ಸಂದರ್ಭ ನಾವು ಆ ದಾಳಿ ಇಂದೇ ನಡೆಯುತ್ತಿದೆಯೇನೋ ಎಂಬಂತೆ ಟ್ವೀಟ್ ಮಾಡುತ್ತಿದ್ದೇವೆ ಯುಬಿಎಲ್ ರೇಡ್’’ @ ಸಿಐಎ ಎಂದು ಸಂಸ್ಥೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿತ್ತು.
ಅಮೆರಿಕಾ ಅಧ್ಯಕ್ಷ ಒಬಾಮಾ ಹಾಗೂ ದೇಶದ ಇತರ ಉನ್ನತ ಅಧಿಕಾರಿಗಳು ವೈಟ್ ಹೌಸ್ ನಲ್ಲಿ ಘಟನಾವಳಿಗಳನ್ನು ಪರದೆಯ ಮೇಲೆ ವೀಕ್ಷಿಸುತ್ತಿರುವ ಖ್ಯಾತ ಛಾಯಾಚಿತ್ರವೂ ಈ ಟ್ವೀಟ್ ಗಳಲ್ಲಿ ಒಳಗೊಂಡಿತ್ತು.
ಕೆಲವೊಂದು ಟ್ವೀಟುಗಳು ಹೀಗಿದ್ದವು : ‘‘1.51 ಪಿಎಂ ಇಡಿಟಿ -ಅಫ್ಘಾನಿಸ್ತಾನದಿಂದ ಹೊರಟ ಹೆಲಿಕಾಪ್ಟರುಗಳು ಅಬ್ಬೊಟ್ಟಾಬಾದ್, ಪಾಕಿಸ್ತಾನದಲ್ಲಿರುವ ಕಂಪೌಂಡೊಂದರತ್ತ ಹಾರಿದವು ಯುಬಿಎಲ್ ರೇಡ್."
3.30 ಪಿಎಂ. ಇಡಿಟಿ : ಎರಡು ಹೆಲಿಕಾಪ್ಟರುಗಳು ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿರುವ ಕಂಪೌಂಡಿನಲ್ಲಿ ಇಳಿಯಿತು. ಒಂದು ಪತನವಾಯಿತು. ಆದರೆ ದಾಳಿ ಯಾವುದೇ ವಿಳಂಬ ಯಾ ಗಾಯಗಳಿಲ್ಲದೆ ಮುಂದುವರಿಯಿತು ಯುಬಿಎಲ್ ರೇಡ್.’’
‘‘3.39 ಪಿಎಂ ಇಡಿಟಿ - ಒಸಾಮ ಬಿನ್ ಲಾಡೆನ್ ಮೂರನೇ ಮಹಡಿಯಲ್ಲಿ ಪತ್ತೆ, ಆತನ ಹತ್ಯೆ ಯುಬಿಎಲ್ ರೇಡ್.’’
ಈ ‘ನೇರ ಟ್ವೀಟುಗಳ’ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿ ಐ ಎ ಮುಖ್ಯಸ್ಥ ಜಾನ್ ಬ್ರೆನ್ನನ್, ಬಿನ್ ಲಾಡೆನ್ ನಂತೆಯೇ ಡಾಯಿಶ್ ಮುಖ್ಯಸ್ಥನನ್ನು ಮುಗಿಸುವುದೂ ‘ದೊಡ್ಡ ಪ್ರಭಾವ’ ಬೀರಲಿದೆ ಎಂದು ಹೇಳಿದರು.
‘‘ನಾವು ಅಲ್ ಖೈದಾದ ದೊಡ್ಡ ಭಾಗವನ್ನು ನಾಶ ಪಡಿಸಿದ್ದೇವೆಯಾದರೂ ಅದನ್ನು ಸಂಪೂರ್ಣವಾಗಿ ವಿನಾಶ ಮಾಡಿಲ್ಲ. ನಮ್ಮ ಕಾರ್ಯದ ಮೇಲೆ ನಮ್ಮ ಸಂಪೂರ್ಣ ಗಮನವಿರಬೇಕು,’’ಎಂದವರು ನುಡಿದರು.







