ಅಸ್ಸಾಂ : ಬದ್ರುದ್ದೀನ್ ಅಜ್ಮಲ್ ಗೆ ಬಿಜೆಪಿ ಜೊತೆ ಪ್ಯಾರ್ ಆಗ್ಬುಟ್ಟೈತಾ...

ಗುವಾಹಟಿ, ಮೇ 2 : ಅಸ್ಸಾಂ ಅಸೆಂಬ್ಲಿ ಚುನಾವಣೆ ಮುಗಿದ ಕೂಡಲೇ ಕುಟುಂಬ ಸಮೇತ ಮಕ್ಕಾ ಯಾತ್ರೆಗೆ ತೆರಳಿ ಇದೀಗ ದೆಹಲಿಗೆ ಹಿಂದಿರುಗಿರುವ ಆಲ್ ಇಂಡಿಯಾ ಯುನೈಟೆಟ್ ಡೆಮೊಕ್ರೆಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಗೆ ಬಿಜೆಪಿ ಮೇಲೆ ಪ್ರೀತಿ ಹುಟ್ಟಿದೆಯೇ? ಹೀಗೊಂದು ಪ್ರಶ್ನೆ ಎದುರಾಗಲು ಕಾರಣವೂ ಇದೆ.
ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿಯಂತೆ ತಮ್ಮ ಪಕ್ಷ ಹಾಗೂ ಬಿಜೆಪಿ ಜತೆ ಮಾತುಕತೆಗಳ ಸಂಭಾವ್ಯತೆಯ ಬಗ್ಗೆ ಮಾಧ್ಯಮಗಳಲ್ಲಿ ಕೇಳಿ ಬರುತ್ತಿರುವ ಗುಸುಗುಸು ಅವರಿಗೆ ಸ್ವಲ್ಪ ಮಟ್ಟಿಗೆ ಇರಿಸುಮುರಿಸು ಉಂಟು ಮಾಡಿದೆ.
ಈ ಬಗ್ಗೆ ಮಾತನಾಡಲು ಅವರು ಹಿಂಜರಿಯುತ್ತಾರಾದರೂ ಅವರ ಅಭಿಪ್ರಾಯ ಸ್ವಾರಸ್ಯಕರವಂತೂ ಹೌದು. ‘‘ಮುಫ್ತಿ ಸಾಬ್ ಕೆಲವೊಂದು ಕಾರಣಗಳಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರು ಎಂಬ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಿದೆ. ಆದರೆ ಅವರ ಹುಟ್ಟೂರಲ್ಲಿ ನಡೆದ ಅಂತ್ಯಕ್ರಿಯೆಗೆ ಅಲ್ಪ ಸಂಖ್ಯೆಯಲ್ಲಿ ಜನ ಸೇರಿದ್ದರು. ಅಂತ್ಯಕ್ರಿಯೆಗೆ ಲಕ್ಷಗಟ್ಟಲೆ ಜನರು ಸೇರುವ ಕಡೆಯಲ್ಲಿ ಕೇವಲ 2,000 ಮಂದಿ ಸೇರಿದ್ದರು,’’ಎಂದು ಅವರು ಹೇಳಿದರು.
ಅರುಣಾಚಲ ಪ್ರದೇಶ ಹಾಗೂ ಉತ್ತರಾಖಂಡದ ಘಟನಾವಳಿಗಳನ್ನು ಗಮನಿಸಿ ಚುನಾವಣಾ ಫಲಿತಾಂಶದ ನಂತರ ತಮ್ಮ ಪಕ್ಷದ ಶಾಸಕರ ಬಗ್ಗೆ ಅಜ್ಮಲ್ ಚಿಂತಿತರೂ ಆಗಿದ್ದಾರೆ. ‘‘ನಾನು ಎಲ್ಲರ ಪಾಸ್ ಪೋರ್ಟ್ ಗಳನ್ನೂ ಸಿದ್ಧಪಡಿಸಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಕೂಡಲೇ ಅವರನ್ನು ವಿದೇಶಕ್ಕೆ ಕಳುಹಿಸುತ್ತೇನೆ. ಅವರನ್ನು ಬೇರೆಡೆ ಸೆಳೆಯುವ ಯತ್ನಗಳು ನಡೆಯಬಹುದಾಗಿದ್ದುದರಿಂದ ಭಾರತದಲ್ಲಿ ಅವರು ಸುರಕ್ಷಿತರಲ್ಲ,’’ ಎಂದು ಅವರು ಹೇಳಿದ್ದಾರೆ. ‘‘ಸುಗಂಧ ವ್ಯಾಪಾರಿಯಾಗಿರುವ ತನಗೆ 27 ದೇಶಗಳಲ್ಲಿ ವ್ಯವಹಾರಗಳಿವೆ,’’ಎಂದೂ ಅವರು ಹೇಳುತ್ತಾರೆ.
‘ಕಾಂಗ್ರೆಸ್ ಅಥವಾ ಬಿಜೆಪಿ ಮೈತ್ರಿಕೂಟ ಬಹುಮತ ಗಳಿಸುವ ಸಂಭವ ಕಡಿಮೆ,’’ಎಂದು ಹೇಳುವ ಅವರು ‘‘ನಾವು ಹೊರಗಿದ್ದುಕೊಂಡು ತಮಾಷೆಯನ್ನು ನೋಡುತ್ತೇವೆ. ಆರು ತಿಂಗಳಲ್ಲಿ ಮರು ಮತದಾನ ನಡೆಯುವುದು. ಆಗ ನಮ್ಮ ಬೆಂಬಲಿಗರು ಅತ್ಯುತ್ಸಾಹದಿಂದ ನಮಗೆ ಮತ ಚಲಾಯಿಸಲಿದ್ದಾರೆ,’’ಎಂದರು.







