ಮಹಿಳೆಯ ಕೊಲೆ ಪ್ರಕರಣ: ಜೈಲಿನಿಂದ ಪರಾರಿಯಾಗಿದ್ದ ಆರೋಪಿ ಸೆರೆ
ಕಾಸರಗೋಡು, ಮೇ 2 : ಮಹಿಳೆಯನ್ನು ಕತ್ತು ಹಿಸುಕಿ ಕೊಲೆಗೈದು ಜೈಲಿನಿಂದ ಪರಾರಿಯಾಗಿದ್ದ ಆರೋಪಿಯೋರ್ವನನ್ನು ಕಾಸರಗೋಡಿನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ಕಣ್ಣೂರಿನ ಅಭಿಲಾಷ್ ಎಂದು ಗುರುತಿಸಲಾಗಿದೆ.
2001 ರಲ್ಲಿ ಮಲಪ್ಪುರಂ ಮಂಜೇರಿಯಲ್ಲಿ 50 ವರ್ಷದ ಬಿಫಾತಿಮಾ ಎಂಬಾಕೆಯನ್ನು ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ.
ಈತ ವಾಸಿಸುತ್ತಿದ್ದ ವಸತಿಗೃಹದ ಮಾಲಕಿಯಾಗಿದ್ದ ಬಿಫಾತಿಮಾ ರನ್ನು ಬಾಡಿಗೆ ಕೇಳಲು ವಸತಿ ಗೃಹಕ್ಕೆ ಬಂದ ಸಂದರ್ಭದಲ್ಲಿ ಕತ್ತು ಹಿಸುಕಿ ಕೊಲೆಗೈದು 17 ಪವನ್ ಚಿನ್ನಾಭರಣವನ್ನು ದೋಚಿದ್ದನು.
ಕೊಲೆ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು . 2007 ರಲ್ಲಿ ಕಣ್ಣೂರು ಸೆಂಟ್ರಲ್ ಜೈಲ್ ನಿಂದ ಪರಾರಿಯಾಗಿದ್ದನು. ಬೆಂಗಳೂರು , ಮುಂಬೈ ಮೊದಲಾದೆಡೆ ಹೋಟೆಲ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತ ಕಾಸರಗೋಡಿಗೆ ಬಂದು ವಸತಿ ಗೃಹವೊಂದರಲ್ಲಿ ತಂಗಿರುವುದಾಗಿ ಲಭಿಸಿದ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ .





