ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ಡಿ. ಎನ್. ನರಸಿಂಹ ರಾಜು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು.ಮೇ.2:ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ಡಿ. ಎನ್. ನರಸಿಂಹ ರಾಜು ಅವರು ಇಂದಿಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಔತಣ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಅವರು ಮುಖ್ಯ ಮಾಹಿತಿ ಆಯುಕ್ತ ನರಸಿಂಹರಾಜು ಅವರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ನರಸಿಂಹರಾಜು ಅವರು ಆಂಗ್ಲ ಭಾಷೆಯಲ್ಲಿ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ. ಪರಮೇಶ್ವರ್, ರಾಜ್ಯ ಮುಖ್ಯಮಾಹಿತಿ ಆಯುಕ್ತರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಕೆ. ಕೆ. ಮಿಶ್ರಾ ಹಾಗೂ ಎ. ಕೆ. ಎಂ. ನಾಯಕ್, ರಾಜ್ಯ ಚುನಾವಣಾ ಆಯುಕ್ತ ಪಿ. ಎನ್. ಶ್ರೀನಿವಾಸಾಚಾರಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ. ಕೆ. ಶಂಕರಲಿಂಗೇಗೌಡ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಪಿ. ಓಂಪ್ರಕಾಶ್, ಹಿರಿಯ ಅಧಿಕಾರಿಗಳು ಹಾಗೂ ಗ್ಪಣ್ಯರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಮುನ್ನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು ರಾಜ್ಯ ಮುಖ್ಯ ಆಯುಕ್ತರ ನೇಮಕಾತಿ ಕುರಿತಂತೆ ರಾಜ್ಯಪಾಲರು ಹೊರಡಿಸಿರುವ ಆದೇಶವನ್ನು ವಾಚಿಸಿ, ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು.





