ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯ: ಎ.ಕೆ. ಆ್ಯಂಟನಿ

ಮಂಜೇಶ್ವರ, ಮೇ 2: ಮಂಜೇಶ್ವರ ವಿಧಾನಸಬಾ ಕ್ಷೇತ್ರದಲ್ಲಿ ದಶಕಗಳಿಂದ ಹೋರಾಡುತ್ತಿರುವ ಬಿಜೆಪಿಯನ್ನು ಇಲ್ಲಿನ ಪ್ರಬುದ್ಧ ಮತದಾರರು ಸೋಲಿಸಿದ್ದಾರೆ. ಈ ಬಾರಿಯೂ ಅದು ಪುನಾರಾವರ್ತನೆಯಾಗಬೇಕೆಂದು ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಹೇಳಿದ್ದಾರೆ.
ಚುನಾವಣಾ ಪ್ರಚಾರಾರ್ಥ ವರ್ಕಾಡಿ ಮಜೀರ್‌ಪಳ್ಳದಲ್ಲಿ ರವಿವಾರ ಸಂಜೆ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷ ಇಲ್ಲಿ ಶಾಸಕರಾಗಿದ್ದ ಐಕ್ಯ ಪ್ರಜಾಪ್ರಭುತ್ವ ರಂಗದ ಪಿ.ಬಿ.ಅಬ್ದುರ್ರಝಾಕ್ ತನ್ನ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಶಾಂತಿ, ಸಮಾಧಾನವನ್ನು ಬಯಸುವ ಮಂಜೇಶ್ವರದ ಜನತೆ ಈ ಬಾರಿ ಕೋಮುವಾದಿ ಬಿಜೆಪಿಯನ್ನು ಮೂಲೋತ್ಥಾಟನೆ ಮಾಡಲು ಪಣತೊಡಬೇಕು. ಕೇರಳದ ವಿಧಾನಸಭೆಗೆ ಕೋಮುವಾದಿ ಶಕ್ತಿಗಳು ಪ್ರವೇಶಿಸದಂತೆ ಜಾತ್ಯಾತೀತ ಶಕ್ತಿಗಳು ಜತೆಗೂಡಬೇಕೆಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮಂಜೇಶ್ವರದಲ್ಲಿ ಅಭಿವೃದ್ಧಿಗೆ ಶಾಸಕ ಅಬ್ದುರ್ರಝಾಕ್ ಬಹಳಷ್ಟು ಪ್ರಾತಿನಿಧ್ಯವನ್ನು ನೀಡಿದ್ದಾರೆ. ಗಡಿ ಪ್ರದೇಶದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿವೆ. ನಾಡಿನ ಮಿಡಿತವನ್ನು ಬಲ್ಲ ಅಬ್ದುರ್ರಝಾಕ್‌ರನ್ನು ಇಲ್ಲಿನ ಜನತೆ ಮತ್ತೊಮ್ಮೆ ಗೆಲ್ಲಿಸುವಂತೆ ಅವರು ಕರೆ ನೀಡಿದರು.
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಮಾತನಾಡಿ, ಕೋಮುವಾದಿ ಶಕ್ತಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತವೆ. ಕೇರಳದ ಜನ ಇದಕ್ಕೆ ಈ ತನಕವೂ ಅವಕಾಶ ಕೊಡಲಿಲ್ಲವೆಂಬುದು ಶ್ಲಾಘನೀಯ ಎಂದು ಹೇಳಿದರು.
ವರ್ಕಾಡಿ ಪಂಚಾಯತ್ ಯುಡಿಎಫ್ ಚುನಾವಣಾ ಸಮಿತಿ ಅಧ್ಯಕ್ಷ ಎ.ಪ್ರಕಾಶ್ ನಾಕ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದೀನ್ ಬಾವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ. ಶ್ರೀಧರನ್, ಪ್ರಧಾನ ಕಾರ್ಯದರ್ಶಿಗಳಾದ ಕೇಶವಪ್ರಸಾದ್ ನಾಣಿಹಿತ್ತಿಲು, ಸೋಮಶೇಖರ ಜೆ.ಎಸ್, ಸುಂದರ ಆರಿಕ್ಕಾಡಿ, ಮುಖಂಡರಾದ ಪಿ.ಎ.ಅಶ್ರಫ್ ಅಲಿ, ಮಂಜುನಾಥ ಆಳ್ವ, ಎ.ಕೆ.ಎಂ ಅಶ್ರಫ್, ಎಂ.ಅಬ್ಬಾಸ್, ಉಮ್ಮರ್ ಬೋರ್ಕಳ, ಸಾಮಿಕುಟ್ಟಿ, ಆರ್‌ಎಸ್‌ಪಿಯ ನಾಯಕ ಕರಿವೆಳ್ಳೂರು ವಿಜಯನ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಹಮೀದ್ ಕೋಡಿಯಡ್ಕ, ಪದ್ಮನಾ ನರಿಂಗಾನ, ಕುಮಾರ ಭಟ್, ಪಿ.ಬಿ.ಅಬೂಬಕರ್, ರೋನಿ ಡಿಸೋಜಾ, ಪಿ.ಸೋಮಪ್ಪ, ಕೆ.ಸುಧಾಕರ, ಪಿ.ಬಿ.ಅಬ್ದುಲ್ ಮಜೀದ್, ಮಜಲ್ ಮುಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.







