ಸೌದಿ ವಿವಿಗಳ ಮಿಶ್ರ ಪದವಿ ಪ್ರದಾನ ಸಮಾರಂಭಗಳು ಹುಟ್ಟು ಹಾಕಿದ ಚರ್ಚೆ
.jpg)
ರಿಯಾದ್, ಮೇ 2: ದಮ್ಮಾಮ್‌ನಲ್ಲಿರುವ ಕಿಂಗ್ ಫೈಸಲ್ ವಿಶ್ವವಿದ್ಯಾನಿಲಯ (ಕೆಎಫ್‌ಯು) ಮತ್ತು ದಹ್ರಾನ್‌ನಲ್ಲಿರುವ ಕಿಂಗ್ ಫಾಹದ್ ಪೆಟ್ರೋಲಿಯಂ ಮತ್ತು ಖನಿಜ ವಿಶ್ವವಿದ್ಯಾನಿಲಯ- ಈ ಎರಡು ಸಂಸ್ಥೆಗಳಲ್ಲಿ ನಡೆದ ವಿದ್ಯಾರ್ಥಿಗಳು ಮತ್ತು ಹೆತ್ತವರನ್ನೊಳಗೊಂಡ ಮಿಶ್ರ ಪದವಿ ಪ್ರದಾನ ಸಮಾರಂಭಗಳು ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದೆ. ಇದು ಪದ್ಧತಿ, ವೌಲ್ಯಗಳು ಮತ್ತು ಧರ್ಮಕ್ಕೆ ವಿರುದ್ಧವಾಗಿದೆ ಎಂದು ಸಂಪ್ರದಾಯವಾದಿಗಳು ಭಾವಿಸಿದ್ದಾರೆ.
ಹೆತ್ತವರನ್ನು ಜೊತೆಗೆ ಸೇರಿಸಿಕೊಂಡು ಮೊದಲು ಪದವಿ ಪ್ರದಾನ ಸಮಾರಂಭ ಏರ್ಪಡಿಸಿದ್ದು ಕೆಎಫ್‌ಯು. ಆ ಸಮಾರಂಭದ ವೀಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಇಂಥ ಸಮಾರಂಭಗಳ ಪರ ಮತ್ತು ವಿರೋಧಿಗಳ ನಡುವೆ ಕಾವೇರಿದ ಚರ್ಚೆಯನ್ನು ಹುಟ್ಟುಹಾಕಿವೆ ಎಂದು ಸ್ಥಳೀಯ ದೈನಿಕವೊಂದು ರವಿವಾರ ವರದಿ ಮಾಡಿದೆ.
ಇಲ್ಲಿ ಸಂಗೀತವಿದೆ ಹಾಗೂ ಉಭಯ ಲಿಂಗಿಗಳು ಬೆರೆಯುತ್ತಾರೆ; ಹಾಗಾಗಿ ಇಂಥ ಕಲ್ಪನೆಯನ್ನು ತಾವು ವಿರೋಧಿಸುವುದಾಗಿ ವಿರೋಧಿಗಳು ಹೇಳಿದ್ದಾರೆ. ಪದವಿ ಪ್ರದಾನ ಸಮಾರಂಭವೆಂದರೆ ಹೆತ್ತವರು ಮತ್ತು ಅವರ ಮಕ್ಕಳ ಸಂತೋಷ ಮತ್ತು ಸಂಭ್ರಮದ ಕೊನೆಯ ಕ್ಷಣಗಳಾಗಿವೆ ಎಂದು ಪರವಾಗಿರುವವರು ಅಭಿಪ್ರಾಯಪಡುತ್ತಾರೆ.
ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ಹಾಜರಾಗಲು ತಾಯಂದಿರು ಬೇಗನೆ ಸಿದ್ಧಗೊಳ್ಳುತ್ತಾರೆ ಹಾಗೂ ಅಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ ಎಂದು ಕೆಎಫ್‌ಯುಪಿಎಂನ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.
ಈ ನಡುವೆ, ರಿಯಾದ್‌ನ ಕಿಂಗ್ ಸೌದ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ತಾಯಂದಿರು, ಪದವಿ ಪ್ರದಾನ ಸಮಾರಂಭಗಳಲ್ಲಿ ಭಾಗವಹಿಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾನಿಲಯವು ಹಲವು ವರ್ಷಗಳಿಂದ ವಿದ್ಯಾರ್ಥಿನಿಯರಿಗಾಗಿ ಪ್ರದವಿ ಪ್ರದಾನ ಕಾರ್ಯಕ್ರಮವನ್ನು ಟಿವಿಯಲ್ಲಿ ನೇರಪ್ರಸಾರಗೊಳಿಸುತ್ತಿದೆ.
10,000 ಆಸನ ಸಾಮರ್ಥ್ಯದ ಮುಚ್ಚಿದ ಕ್ರೀಡಾ ಹಾಲ್‌ನ ಕಾಮಗಾರಿಯನ್ನು ವಿಶ್ವವಿದ್ಯಾನಿಲಯವು ಪೂರ್ತಿಗೊಳಿಸುತ್ತಿದೆ ಎಂದು ಕೆಎಸ್‌ಯು ಅಧಿಕಾರಿಯೊಬ್ಬರು ತಿಳಿಸಿದರು. ಅಲ್ಲಿ ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ ಹಾಗೂ ತಾಯಂದಿರಿಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತದೆ.
‘‘ಹೆತ್ತವರು ಪದವಿ ಪ್ರದಾನ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಾನು ಬೆಂಬಲಿಸುತ್ತೇನೆ. ಇದಕ್ಕಾಗಿ ಸೂಕ್ತ ಸಭಾಂಗಣಗಳನ್ನು ಸಿದ್ಧಪಡಿಸಲಾಗಿದೆ ಹಾಗೂ ಕೆಲವು ಸಭಾಂಗಣಗಳಲ್ಲಿ ಅಡ್ಡಗೋಡೆಗಳಿವೆ. ಮುಖವನ್ನು ಮುಚ್ಚುವುದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ತಮ್ಮ ತಮ್ಮ ಪದ್ಧತಿಗಳಿಗನುಸಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಸ್ವತಂತ್ರರಾಗಿದ್ದಾರೆ. ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ’’ ಎಂದು ಕೆಎಸ್‌ಯು ಅಧಿಕಾರಿ ಮುಹಮ್ಮದ್ ಅಲ್-ಅಹ್ಮದ್ ಹೇಳಿದರು.







