ಉತ್ತರ ಕೊರಿಯ: ಈ ವಾರ ಮದುವೆ, ಅಂತ್ಯಸಂಸ್ಕಾರ ನಿಷೇಧ

ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಮೇ 2: ದೇಶದಲ್ಲಿ ಈ ವಾರ ಮದುವೆ ಮತ್ತು ಅಂತ್ಯಸಂಸ್ಕಾರಗಳನ್ನು ನಿಷೇಧಿಸಲು ಉತ್ತರ ಕೊರಿಯ ಮುಂದಾಗಿದೆ. ದೇಶದ ಪರಮೋಚ್ಛ ನಾಯಕ ಕಿಮ್ ಜಾಂಗ್ ಉನ್ ದೇಶದ ಮೇಲಿನ ತನ್ನ ಹಿಡಿತವನ್ನು ಬಲಪಡಿಸುವ ಹಾಗೂ ಉತ್ತರ ಕೊರಿಯವನ್ನು ಪರಮಾಣು ಶಕ್ತ ದೇಶ ಎಂಬುದಾಗಿ ಘೋಷಿಸುವ ಸಮಾರಂಭವೊಂದು ನಡೆಯಲಿರುವ ಹಿನ್ನೆಲೆಯಲ್ಲಿ, ಯಾವುದೇ ಅವಗಢಗಳು ನಡೆಯದಂತೆ ಖಾತ್ರಿ ಪಡಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ‘ಅಲ್ ಅರೇಬಿಯ.ನೆಟ್’ ವರದಿ ಮಾಡಿದೆ. ಭದ್ರತಾ ಕಾರಣಗಳಿಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಈ ವಾರ 36 ವರ್ಷಗಳಲ್ಲೇ ಮೊದಲ ಬಾರಿಗೆ ದೇಶದಲ್ಲಿ ಮೊದಲ ಕಾಂಗ್ರೆಸ್ ಸಮಾವೇಶ ನಡೆಯಲಿದೆ.
ಮಹತ್ವದ ಘಟನೆಗಳು ನಡೆದ ಸಂದರ್ಭಗಳಲ್ಲಿ ಉತ್ತರ ಕೊರಿಯ ಇಂಥ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳಿವೆ. ‘‘ಭದ್ರತಾ ಕಾರಣ’’ಗಳಿಗಾಗಿ ಅದು ಚೀನಾದೊಂದಿಗಿನ ಗಡಿಯನ್ನೂ ತಾತ್ಕಾಲಿಕವಾಗಿ ಮುಚ್ಚಿತ್ತು ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವಾಲಯದ ವಕ್ತಾರರೋರ್ವರು ತಿಳಿಸಿದರು. ದೇಶಾದ್ಯಂತದಿಂದ ಪ್ರತಿನಿಧಿಗಳು ರಾಜಧಾನಿ ಪ್ಯಾಂಗ್‌ಯಾಂಗ್‌ನತ್ತ ಮುಖ ಮಾಡುತ್ತಿದ್ದಾರೆ.





