ಸ್ವಾಭಿಮಾನದ ಬದುಕು ಕಾರ್ಮಿಕರದ್ದಾಗಬೇಕು: ಬಿ.ಎಂ.ಭಟ್
ಸುಳ್ಯದಲ್ಲಿ ಕಾರ್ಮಿಕರ ದಿನಾಚರಣೆ

ಸುಳ್ಯ, ಮೇ 2: ಇನ್ನೊಬ್ಬರ ಸಂಪತ್ತನ್ನು ಹೆಚ್ಚಿಸುವ ಕೆಲಸವನ್ನು ಕಾರ್ಮಿಕರು ಮಾಡುತ್ತಾ ಬರುತ್ತಿದ್ದಾರೆ. ಆದರೆ ಅವರ ಸಂಪತ್ತು ಹೆಚ್ಚುವುದೇ ಇಲ್ಲ. ಕಾರ್ಮಿಕ ತನ್ನ ಶಕ್ತಿಯನ್ನು ನಿತ್ಯ ನಷ್ಟ ಮಾಡಿಕೊಳ್ಳುತ್ತಾ ಬರುತ್ತಿದ್ದಾನೆ. ಆದರೆ ಆತನಿಗೆ ಶಕ್ತಿ ತುಂಬುವ ಕೆಲಸ ನಡೆಯುವುದೇ ಇಲ್ಲ. ಸ್ವಾತಂತ್ರ, ಸ್ವಾಭಿಮಾನದ ಬದುಕು ಕಾರ್ಮಿಕರದ್ದಾದಾಗ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದು ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿ.ಎಂ.ಭಟ್ ಹೇಳಿದ್ದಾರೆ.
ಸುಳ್ಯದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಶ್ರಯದಲ್ಲಿ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವರ್ತಕ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ, ದೇಶ ಕಟ್ಟುವ ಕೆಲಸದಲ್ಲಿ ಕಾರ್ಮಿಕರ ಪಾತ್ರವಿದೆ. ಕಾರ್ಮಿಕರು ಶಿಸ್ತು ಕಾಪಾಡಿಕೊಂಡು ದುಶ್ಚಟಗಳಿಗೆ ಬಲಿಯಾಗದೆ ಉಳಿತಾಯ ಮಾಡಲು ಕಲಿಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಮುಂದೆ ತರಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಪಿ.ಜಾನಿ ಕಲ್ಲುಗುಂಡಿ, ಯಾವುದೇ ಸವಲತ್ತು ಪಡೆಯಲು ಸಂಘಟನೆ ಬಲಿಷ್ಟವಾದರೆ ಮಾತ್ರ ಸಾಧ್ಯ ಎಂದರು.
ಈ ಸಂದರ್ಭ ದೇವಚಳ್ಳದ ರಘು ಮೇಸ್ತ್ರಿಯವರನ್ನು ಕಾರ್ಮಿಕ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಇಂಜಿನಿಯರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಜೀವನ್ ನಾರ್ಕೋಡು, ಸಂಘಟನೆಯ ನಗರ ಸಮಿತಿ ಅಧ್ಯಕ್ಷ ವಿಶ್ವನಾಥ ನೆಲ್ಲಿ ಬಂಗಾರಡ್ಕ, ಕಟ್ಟಡ ಸಮಿತಿ ಗೌರವಾಧ್ಯಕ್ಷ ನೆಲ್ಸನ್ ಪಿ.ವಿ., ಕಟ್ಟಡ ಸಮಿತಿ ಅಧ್ಯಕ್ಷ ನಾಗರಾಜ ಮೇಸ್ತ್ರಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಿವರಾಮ ಗೌಡ, ಕೋಶಾಧಿಕಾರಿ ಬಿಜು ಅಗಸ್ಟಿನ್ ಉಪಸ್ಥಿತರಿದ್ದರು.
ಶರತ್ ಕಲ್ಲುಗುಂಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗಾಂಧಿನಗರದಿಂದ ಜ್ಯೋತಿ ವೃತ್ತದವರೆಗೆ ಕಾರ್ಮಿಕರಿಂದ ಮೆರವಣಿಗೆ ನಡೆಯಿತು.







