ಒಂದೆಡೆ ಪೋಲಾಗುತ್ತಿದೆ ನೀರು, ಮತ್ತೊಂದೆಡೆ ಹನಿ ನೀರಿಗೂ ತತ್ವಾರ
ಇದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ವೈಖರಿ

ಶಿವಮೊಗ್ಗ, ಮೇ 2: ಒಂದೆಡೆ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗಾಗಿ ನಾಗರಿಕರು ಪರದಾಡುತ್ತಿದ್ದು, ಇಲ್ಲಿಯವರೆಗೂ ಸಮಸ್ಯೆ ಪರಿಹಾರವಾಗಿಲ್ಲ. ಮತ್ತೊಂದೆಡೆ ನಗರದ ಕೆಲ ಬಡಾವಣೆಗಳಲ್ಲಿ ಅಪಾರ ಪ್ರಮಾಣದ ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಇದು ಪಾಲಿಕೆ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ವಾರ್ಡ್ ಸಂಖ್ಯೆ 20ರ ಸವಾರ್‌ಲೈನ್ ರಸ್ತೆಯ ಮೀನಾಕ್ಷಿ ಬೀದಿ ಸುತ್ತಮುತ್ತಲಿನ ಏರಿಯಾಗಳಲ್ಲಿ ಹಲವು ಗಂಟೆಗಳ ಕಾಲ ಅಪಾರ ಪ್ರಮಾಣದ ಕುಡಿಯುವ ನೀರು ವ್ಯರ್ಥವಾಗಿ ಹರಿದು ಚರಂಡಿ ಸೇರಿದೆ. ಪಾಲಿಕೆ ಅಧಿಕಾರಿ-ಸಿಬ್ಬಂದಿ ಅಸಮರ್ಪಕ ಮೇಲ್ವಿಚಾರಣೆಯಿಂದ ಸಾವಿರಾರು ಲೀಟರ್ ನೀರು ಪೋಲಾಗುವಂತಾಗಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಬೆಳಗ್ಗೆ ಬಡಾವಣೆಗೆ ನೀರು ಬಿಟ್ಟ ನಂತರ ಮುಖ್ಯ ಟ್ಯಾಂಕ್‌ನ ವಾಲ್ ಬಂದ್ ಮಾಡಿಲ್ಲ. ಇದರಿಂದ ಮಧ್ಯಾಹ್ನ ಸುಮಾರು 2 ಗಂಟೆಯವರೆಗೂ ನಲ್ಲಿಗಳಲ್ಲಿ ನೀರು ಬರುತ್ತಿತ್ತು. ಕೆಲವೆಡೆ ನಾಗರಿಕರು ನಲ್ಲಿಗಳಿಗೆ ಬಟ್ಟೆ ತುರುಕಿ ನೀರು ಪೋಲಾಗದಂತೆ ಎಚ್ಚರವಹಿಸಿದರು. ಆದರೆ ಮತ್ತೆ ಕೆಲವೆಡೆ ನಲ್ಲಿಗಳಿಂದ ನೀರು ಹರಿದು ಹೋಗುತ್ತಿತ್ತು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಈ ಕುರಿತಂತೆ ಸ್ಥಳೀಯ ಪಾಲಿಕೆ ಸದಸ್ಯ ಐಡಿಯಲ್ ಗೋಪಿಯವರ ಗಮನಕ್ಕೆ ತರಲಾಯಿತು. ವಿಷಯ ತಿಳಿಯುತ್ತಿದ್ದಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ, ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಕುಡಿಯುವ ನೀರಿನ ಪೋಲು ತಡೆಗಟ್ಟಿದ್ದಾರೆ ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ. ಹಾಹಾಕಾರ: ಮಹಾನಗರ ಪಾಲಿಕೆ ಆವರಣದಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಘಟಕ ದುರಸ್ತಿಯಾಗಿ ನಾಲ್ಕೈದು ದಿನಗಳಾದರೂ ಇಲ್ಲಿಯವರೆಗೂ ನೀರು ಪೂರೈಕೆಯಾಗುತ್ತಿಲ್ಲದಿನನಿತ್ಯ ಕಚೇರಿಗೆ ಆಗಮಿಸುವ ನೂರಾರು ನಾಗರಿಕರು ಕುಡಿಯುವ ನೀರಿಗೆ ನಡೆಸುತ್ತಿರುವ ಪರಿತಾಪ ಮುಂದುವರಿದಿದೆ. ಇತ್ತೀಚೆಗೆ ಪಾಲಿಕೆ ಆವರಣದಲ್ಲಿರುವ ಅವ್ಯವಸ್ಥೆಯ ಬಗ್ಗೆ ಪತ್ರಿಕೆಗಳಲ್ಲಿ ಬಂದ ಸುದ್ದಿಯ ನಂತರ ಶೌಚಾಲಯ ದುರಸ್ತಿಯಾಗಿದೆ. ಆದರೆ ಕುಡಿಯುವ ನೀರಿನ ಘಟಕ ಮಾತ್ರ ದುರಸ್ತಿಯಾಗಿಲ್ಲ. ಸಣ್ಣ ಘಟಕ ದುರಸ್ತಿ ಮಾಡಿ ನೀರು ಪೂರೈಕೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕಾರ್ಪೊರೇಟರ್ ಗರಂ: ಮಹಾನಗರ ಪಾಲಿಕೆ ಕಚೇರಿಯು 20ನೆ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಕಚೇರಿ ಆವರಣದಲ್ಲಿ ನಾಗರಿಕರು ಕುಡಿಯುವ ನೀರಿಗೆ ಪರದಾಡುತ್ತಿರುವ ವಿಷಯ ಅರಿತ ಆ ವಾರ್ಡ್ ವ್ಯಾಪ್ತಿಯ ಕಾರ್ಪೊರೇಟರ್ ಆದ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿಯವರು ಸಂಬಂಧಿಸಿದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರವಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದೇನೆ. ಆದಾಗ್ಯೂ ಸಮಸ್ಯೆ ಪರಿಹಾರವಾಗಿಲ್ಲ. ಮತ್ತೊಂದೆಡೆ ತಮ್ಮ ವಾರ್ಡ್ ವ್ಯಾಪ್ತಿಯ ಕೆಲ ಏರಿಯಾಗಳಲ್ಲಿ ವ್ಯರ್ಥವಾಗಿ ಕುಡಿಯುವ ನೀರು ಹರಿದು ಹೋಗುತ್ತಿದೆ. ಮತ್ತೆ ಕೆಲ ಬಡಾವಣೆಗಳಲ್ಲಿ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.







