‘ಕಲಿಕೆಗೊಂದು ವೇದಿಕೆ’ ಬೇಸಿಗೆ ಶಿಬಿರಕ್ಕೆ ಚಾಲನೆ

ಮಡಿಕೇರಿ, ಮೇ 2: ಮಕ್ಕಳ ’ೃಜನಶೀಲ ಮತ್ತು ಕ್ರಿಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ ಎಂದು ಜಿಪಂ ಉಪಾಧ್ಯಕ್ಷೆ ರಾಜೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾ ಬಾಲಭವನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಕಲಿಕೆಗೊಂದು ವೇದಿಕೆ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಹಾಡುಗಾರಿಕೆ, ಪ್ರಬಂಧ ಸ್ಪರ್ಧೆ ಮತ್ತಿತರ ಕ್ರಿಯಾಶೀಲ ಮತ್ತು ಸೃಜನಾತ್ಮಕ ಕಲೆಗಳಿದ್ದು, ಅವುಗಳ ಪ್ರದರ್ಶನಕ್ಕೆ ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು. ನಗರಸಭೆ ಅಧ್ಯಕ್ಷೆ ಶ್ರೀಮತಿ ಬಂಗೇರ ಮಾತನಾಡಿ, ಮಕ್ಕಳು ಬೇಸಿಗೆ ಅವಧಿಯ ರಜೆ ವೇಳೆಯಲ್ಲಿ ಒಂದೆಡೆ ಸೇರಿ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶವಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜಯರಾಮ್ ಮಾತನಾಡಿ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 5ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ಏರ್ಪಡಿಸಲಾಗಿರುವ ಕಲಿಕೆಗೊಂದು ವೇದಿಕೆ ಶಿಬಿರದಲ್ಲಿ ಸಮೂಹ ನೃತ್ಯ, ಸಮೂಹ ಸಂಗೀತ, ಸ್ಥಳೀಯ ಕಲೆ, ಚಿತ್ರಕಲೆ, ಕರಕುಶಲ, ಕಸದಿಂದ ರಸ, ಪ್ರಬಂಧ ರಚನೆ, ರಸಪ್ರಶ್ನೆ, ಕವನ ರಚನೆ, ಯೋಗ ತರಬೇತಿ, ರಾಷ್ಟ್ರನಾಯಕರ ಛದ್ಮವೇಷ ಮತ್ತಿತರ ಚಟುವಟಿಕೆಗಳನ್ನು ಬೇಸಿಗೆ ಶಿಬಿರದಲ್ಲಿ ನಡೆಸಲಾಗುತ್ತದೆ ಎಂದರು.
ನಗರಸಭೆ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯರಾದ ಕಾವೇರಮ್ಮ ಸೋಮಣ್ಣ, ಸಂಗೀತಾ ಪ್ರಸನ್ನ, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ, ಸುಂಟಿಕೊಪ್ಪ ಸ್ವಸ್ಥ ಸಂಸ್ಥೆಯ ಮುರುಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಸಂಯೋಜಕ ಶಾರದಾ ರಾಮನ್, ಯಶೋಧ ಮತ್ತಿತರರು ಉಪಸ್ಥಿತರಿದ್ದರು.





