‘ಕಾರ್ಮಿಕರ ಸಂಕಷ್ಟ ಪರಿಹಾರಕ್ಕೆ ಸಂಘಟಿತ ಹೋರಾಟವೇ ದಾರಿ: ಸಿಪಿಐ ಮುಖಂಡ ಬಿ.ಅಮ್ಜದ್

ಚಿಕ್ಕಮಗಳೂರು, ಮೇ 2: ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ದೇಶದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಸಿಲುಕಿದೆ. ಕಾರ್ಮಿಕರ ಶೋಷಣೆಗಳು ಹಾಗೂ ಸಂಕಷ್ಟದ ಪರಿಹಾರಕ್ಕೆ ಸಂಘಟಿತ ಹೋರಾಟವೇ ದಾರಿ ಎಂದು ಸಿಪಿಐ ಮುಖಂಡ ಬಿ.ಅಮ್ಜದ್ ಹೇಳಿದ್ದಾರೆ.
ಅವರು ನಗರದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಸಿಪಿಐ ತಾಲೂಕು ಸಮಿತಿ ಹಮ್ಮಿಕೊಂಡಿದ್ದ 130ನೆ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಡಳಿತದ ಚುಕ್ಕಾಣಿ ಹಿಡಿದಿರುವ ಬಹುತೇಕ ಚುನಾಯಿತ ಜನ ಪ್ರತಿನಿಧಿಗಳು ಅಗರ್ಭ ಶ್ರೀಮಂತರಾಗಿದ್ದಾರೆ. ಚುನಾವಣೆಗಳಲ್ಲಿ ಹಣ ಮತ್ತು ಜಾತಿಯ ಪ್ರಭಾವ ಇರುವವರು ಮಾತ್ರ ಗೆಲ್ಲಲು ಸಾಧ್ಯ ಎಂಬ ವಾತಾವರಣ ಸೃಷ್ಟಿಸಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಉತ್ಪಾದಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೈತ-ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಪ್ರಸುತ್ತ ಕೇಂದ್ರ ಸರಕಾರದ ಆಡಳಿತ ವೈಖರಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿಲ್ಲ ಎಂದು ಹೇಳಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಜಾರ್ಜ್ ಆಸ್ಟಿನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೇ ದಿನ ದುಡಿಯುವ ಜನರ ದಿನವಾಗಿದೆ. ಕಾರ್ಮಿಕ ರಲ್ಲಿ ರಾಜಕೀಯ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲು ಮೇ ತಿಂಗಳಾದ್ಯಂತ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಕಾರ್ಮಿಕರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಹಿರಿಯ ಕಾರ್ಮಿಕರಾದ ಕಾಮ್ರೇಡ್ ಕೃಷ್ಣಪ್ಪ ಧ್ವಜಾರೋಹಣ ಮಾಡುವ ಮೂಲಕ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿದರು. ನಂತರ ಸಿಪಿಐ ಕಚೇರಿಯಿಂದ ಎಂಇಎಸ್ ಶಾಲೆ ಆವರಣದವರೆಗೆ ಕೆಂಪು ಧ್ವಜ ಹಿಡಿದ ವಿವಿದ ಕ್ಷೇತ್ರದ ಕಾರ್ಮಿಕರು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರನ್, ಕಾರ್ಮಿಕ ಮುಖಂಡ ವಕೀಲ ಕೆ.ಎಂ.ಅಬ್ದುಲ್ ಜಬ್ಬಾರ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ, ಜಿಲ್ಲಾ ಸಹ ಕಾರ್ಯದರ್ಶಿ ರಾಧಾಸುಂದ್ರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಕೆ.ಧಾನು, ಹೆಡದಾಳ ಕುಮಾರ್, ಎಚ್.ಎಸ್. ಸೋಮೆಗೌಡ, ಮಂಗಳಾ, ಇಂದುಮತಿ, ರವಿ, ಜಯಕುಮಾರ್, ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.







