ಒಂದು ಮಗು ಬಂದರೂ ಸರಕಾರಿ ಶಾಲೆ ನಡೆಯುತ್ತೆ: ಸಚಿವ ಕಿಮ್ಮನೆ

ಆರ್‌ಟಿಇ ಸೀಟಿಗೆ ಆಧಾರ್ ಕಡ್ಡಾಯ ತಿಂಗಳ ಅಂತ್ಯಕ್ಕೆ ಎಸೆಸೆಲ್ಸಿ ಫಲಿತಾಂಶ
ಸಿಇಟಿ ಫಲಿತಾಂಶಕ್ಕೂ ಮೊದಲು ಪಿಯುಸಿ ಫಲಿತಾಂಶ
17 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಸ್ತಾವನೆ
ಮೇ ತಿಂಗಳಲ್ಲಿ ಶಿಕ್ಷಕರ ಸಾಮೂಹಿಕ ವರ್ಗಾವಣೆ
ಬೆಂಗಳೂರು, ಮೇ 2: ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಒಬ್ಬ ವಿದ್ಯಾರ್ಥಿ ಬಂದರೂ ಶಾಲೆ ಎಂದಿನಂತೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂಬ ವರದಿಗಳು ಪ್ರಸಾರಗೊಂಡಿವೆ. ಸರಕಾರ ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ. ಈ ಬಗ್ಗೆ ಪೋಷಕರಿಗೆ ಆತಂಕ ಬೇಡವೆಂದು ಸ್ಪಷ್ಟಪಡಿಸಿದರು.
ಈಗಾಗಲೇ ಎಲ್ಲ ಶಾಲೆಗಳಿಗೂ ಬೂಟುಗಳನ್ನು ಸರಬ ರಾಜು ಮಾಡಲಾಗಿದೆ. ಇನ್ನು ಸಮವಸ್ತ್ರಗಳನ್ನು ಶಾಲೆ ಪ್ರಾರಂಭ ವಾಗುವ ಒಳಗಾಗಿ ಕೊಡಲಾಗುವುದು.
ಹೈದರಾಬಾದ್ ಕರ್ನಾಟಕದ ಭಾಗಗಳಲ್ಲಿ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಊಟವನ್ನು ಕೊಡಲಾಗುತ್ತಿದ್ದು, ವಿದ್ಯಾರ್ಥಿಗಳ ಬೆಳವಣಿಗೆಗೆ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಿರುವುದಾಗಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಆರ್‌ಟಿಇ ಸೀಟು ಒಂದು ಕುಟುಂಬಕ್ಕೆ ಒಂದೇ. ಆದರೆ, ಕೆಲವು ಕುಟುಂಬಗಳು ಎರಡು-ಮೂರು ಸೀಟುಗಳನ್ನು ಪಡೆದಿರುವುದು ಗಮನಕ್ಕೆ ಬಂದಿದೆ. ಇಂತಹ ದುರುಪಯೋಗಗಳನ್ನು ತಡೆಯುವ ನಿಟ್ಟಿನಲ್ಲಿ ಆಧಾರ್ ಹಾಗೂ ಎಪಿಕ್ ಕಾರ್ಡ್‌ನ್ನು ಕಡ್ಡಾಯ ಮಾಡಲಾಗಿದೆ ಎಂದು ಅವರು ಖಚಿತಪಡಿಸಿದರು.







