ಪಾಕ್-ಭಾರತದ ನಡುವೆ ಶಾಂತಿ ಬಯಸುವ ಕಾರ್ಗಿಲ್ ಹುತಾತ್ಮನ ಪುತ್ರಿ
ಹೊಸದಿಲ್ಲಿ, ಮೇ 2: ‘‘ಇಂದು ನಾನೂ ನನ್ನ ತಂದೆಯ ಹಾಗೆ ಓರ್ವ ಯೋಧೆ. ನಾನು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಾಂತಿಗಾಗಿ ಹೋರಾಡುತ್ತಿದ್ದೇನೆ’’ ಹೀಗೆಂದು ಘೋಷಿಸಿದಾಕೆ ಕಾರ್ಗಿಲ್‌ನಲ್ಲಿ ಹುತಾತ್ಮನಾದ ಯೋಧನೊಬ್ಬನ ಪುತ್ರಿ. ಪಂಜಾಬಿನ ಜಲಂಧರ್ ನಿವಾಸಿ ಗುರ್‌ಮೆಹರ್ ಕೌರ್‌ಳ ತಂದೆ ಕ್ಯಾ.ಮನ್‌ದೀಪ್ ಸಿಂಗ್ 1999ರ ಕಾರ್ಗಿಲ್ ಬಿಕ್ಕಟ್ಟಿನಲ್ಲಿ ಹುತಾತ್ಮರಾದಾಗ ಆಕೆಯಿನ್ನೂ ಎರಡು ವರ್ಷದ ಪುಟ್ಟ ಬಾಲೆ.ಇದೀಗ 19ರ ಹರೆಯದಲ್ಲಿರುವ ಕೌರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ನಾಲ್ಕು ನಿಮಿಷಗಳ ವೀಡಿಯೊದಲ್ಲಿ ಶಬ್ದಗಳಿಗಿಂತ ಆಕೆಯ ವೌನವೇ ಹೆಚ್ಚು ಸದ್ದು ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪ್ರಬಲವಾದ ಶಾಂತಿಸಂದೇಶವನ್ನು ರವಾನಿಸಲು ಕೌರ್ ಬಳಸಿರುವುದು ಇಂಗ್ಲಿಷ್‌ನಲ್ಲಿ ಬರೆದಿರುವ ಭಿತ್ತಿಪತ್ರಗಳನ್ನು ಮಾತ್ರ.
ತಂದೆಯಿಲ್ಲದಿರುವುದು ಯಾವ ಭಾವನೆಗಳನ್ನು ಮೂಡಿಸುತ್ತದೆ ಎಂಬ ಬಗ್ಗೆ ನನ್ನಲ್ಲಿ ಹೆಚ್ಚಿನ ನೆನಪುಗಳಿವೆ ಎಂದಾಕೆ ಹಂಚಿಕೊಂಡಿದ್ದಾಳೆ.
ನನ್ನ ತಂದೆಯನ್ನು ಕೊಂದಿದ್ದರು ಎಂಬ ಕಾರಣಕ್ಕೆ ಪಾಕಿಸ್ತಾನವನ್ನು ಮತ್ತು ಪಾಕಿಸ್ತಾನಿಗಳನ್ನು ನಾನು ಎಷ್ಟೊಂದು ದ್ವೇಷಿಸುತ್ತಿದ್ದೆ ಎನ್ನುವುದೂ ನನಗೆ ನೆನಪಿದೆ ಎಂದು ಒಂದು ಭಿತ್ತಿಪತ್ರ ಹೇಳುತ್ತದೆ.
ಆರರ ಹರೆಯದಲ್ಲಿದ್ದಾಗ ನಾನು ಬುರ್ಖ ಧರಿಸಿದ್ದ ಮಹಿಳೆಯೋರ್ವಳನ್ನು ಚೂರಿಯಿಂದ ಇರಿಯಲು ಪ್ರಯತ್ನಿಸಿದ್ದೆ. ಅದೇಕೋ ನನ್ನ ತಂದೆಯ ಸಾವಿಗೆ ಆಕೆಯೇ ಕಾರಣವೆಂದು ನನಗೆ ಅನಿಸಿಬಿಟ್ಟಿತ್ತು. ನನ್ನ ತಾಯಿ ನನ್ನನ್ನು ಹಿಡಿದೆಳೆದು ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ ಯುದ್ಧ ಎನ್ನುವುದನ್ನು ನನಗೆ ಅರ್ಥ ಮಾಡಿಸಿದ್ದಳು ಎಂದಾಕೆ ಬರೆದುಕೊಂಡಿದ್ದಾಳೆ.
ಎರಡೂ ರಾಷ್ಟ್ರಗಳ ಸರಕಾರಗಳು ತಮ್ಮ ನಾಟಕಗಳನ್ನು ನಿಲ್ಲಿಸಬೇಕು ಮತ್ತು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎನ್ನುವುದು ಕೌರ್ ವೀಡಿಯೊದ ಸಂದೇಶ.
ತೃತೀಯ ಜಗತ್ತಿನ ನಾಯಕತ್ವದೊಂದಿಗೆ ನಾವು ಮೊದಲ ಜಗತ್ತಿನ ರಾಷ್ಟ್ರವಾಗುವ ಕನಸು ಕಾಣುವಂತಿಲ್ಲ ಎಂದು ಕೌರ್ ಬೆಟ್ಟು ಮಾಡಿದ್ದಾಳೆ.





