ಖಾಸಗಿ ಬೋರ್‌ವೆಲ್ ವಶಪಡಿಸಿ ಸಾರ್ವಜನಿಕರಿಗೆ ನೀರು ಪೂರೈಸಿ: ಗ್ರಾಮ ಪಂಚಾಯತ್ ಪಿಡಿಒಗಳಿಗೆ ಜಿಲ್ಲಾಧಿಕಾರಿ ಆದೇಶ
ಬಂಟ್ವಾಳ ತಾಲೂಕು ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆ

ಬಂಟ್ವಾಳ, ಮೇ 3: ಬರೇ ಒಂದು ತಿಂಗಳ ಅವಧಿಗೆ ಅಲ್ಲಲ್ಲಿ ಹೊಸ ಬೋರ್‌ವೆಲ್‌ಗಳನ್ನು ಕೊರೆಯುವ ಬದಲು ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಇರುವ ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದುಕೊಂಡು ಅದರಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದನ್ನು ಅರಿತು ಪಿಡಿಒಗಳು ಕೆಲಸ ನಿರ್ವಹಿಸಬೇಕು. ಖಾಸಗಿಯವರು ನೀರಿನ ಬಾಡಿಗೆ ಬಯಸಿದ್ದಲ್ಲಿ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.
ಮಂಗಳವಾರ ಬಿ.ಸಿ.ರೋಡಿನ ತಾಪಂ ಎಸ್.ಜಿ.ಆರ್.ಎಸ್.ವೈ. ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ತಾಲೂಕಿನ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಬಳಸಿಕೊಂಡು ತಾಲೂಕಿನ ಯಾವುದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದೂರು ಬಾರದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರಿಂದ ಈ ಸಂಬಂಧ ದೂರು ಬಂದಲ್ಲಿ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿಸಲಾಗುವುದು ಎಂದು ಅವರು ಅಧಿಕಾರಿಗೆ ಖಡಕ್ ಸಂದೇಶ ನೀಡಿದರು.
ಯಾವುದೇ ಕಾರಣಕ್ಕೂ ಕುಡಿಯುವ ನೀರಿಗಾಗಿ ಸಾರ್ವಜನಿಕರಿಂದ ದೂರುಗಳು ಬಾರದಂತೆ ಎಚ್ಚರಿಕೆಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಮಸ್ಯೆಗಳು ಉಂಟಾದಲ್ಲಿ ತಾವೇ ಕಾಲ ಕಾಲಕ್ಕೆ ಸಭೆ ನಡೆಸಿ ಅದನ್ನು ಪರಿಹರಿಸಿಕೊಳ್ಳಬೇಕು. ನೀರಿನ ಸಮಸ್ಯೆಯ ಪ್ರಗತಿ ಪರಿಶೀಲನೆ ತಾನು ಮುಂದಿನ ವಾರ ಮತ್ತೆ ತಾಲೂಕಿನ ಆಗಮಿಸಲಿದ್ದು, ಎಂಜಿನಿಯರಿಂಗ್ ವಿಭಾಗ, ಮೆಸ್ಕಾಂ, ಪಿಡಿಒಗಳು ಪರಸ್ಪರ ಹೊಂದಾಣಿಕೆಯೊಂದಿಗೆ ಕೆಲಸ ಮಾಡಬೇಕು. ಮುಂದಿನ ಮೂರು ದಿನಗಳ ಒಳಗಾಗಿ ಆಡಳಿತಾತ್ಮಕ ಮಂಜೂರಾತಿಯನ್ನು ಪಡೆದುಕೊಂಡು ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆದೇಶಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಸಹಾಯಕ ಕಮಿಷನರ್ ಡಾ. ಅಶೋಕ್, ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಶ್ರೀ ವಿದ್ಯಾ, ಉಪ ಕಾರ್ಯದರ್ಶಿ ಉಮೇಶ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಪಿಯೂಸ್ ರೋಡ್ರಿಗಸ್, ಬಂಟ್ವಾಳ ತಹಶೀಲ್ದಾರ್ ಪುರಂದ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಜಿಪಂ ಸದಸ್ಯರಾದ ವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಪದ್ಮಶೇಖರ ಜೈನ್, ಮಂಜುಳ ಮಾದವ ಮಾವೆ, ಮಮತಾ ಗಟ್ಟಿ, ಜಯಶ್ರೀ ಕೊಡಂದೂರು, ಕಮಲಾಕ್ಷಿ ಪೂಜಾರಿ ಅವರು ಚರ್ಚೆಯಲ್ಲಿ ಪಾಲ್ಗೊಂಡರು.
ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾ ಮಿರಾಂದ ಸ್ವಾಗತಿಸಿ ವಂದಿಸಿದರು. ತಾಲೂಕಿನ ವಿವಿಧ ಅಧಿಕಾರಿಗಳು ಭಾಗವಹಿಸಿ ವಿವರಣೆ ನೀಡಿದರು.
ಇನ್ನು ಬಂಟ್ವಾಳಕ್ಕೆ 20 ದಿನಕಷ್ಟೇ ನೀರು!
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ನೀರು ಪೂರೈಸುವ ಬಡ್ಡಕಟ್ಟೆಯ ನೇತ್ರಾವತಿ ನದಿಯ ಕಾಯರ್‌ಗುಂಡಿಯಲ್ಲಿ ಇನ್ನು 20 ದಿನಗಳಿಗೆ ಬೇಕಾಗುವಷ್ಟು ನೀರಿದೆ ಎಂದು ಪುರಸಭಾ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಸಭೆ ಮಾಹಿತಿ ನೀಡಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಪಲ್ಲಮಜಲಿನಲ್ಲಿ ಬೋರ್‌ವೆಲ್ ಕೊರೆಯಲು ತಕರಾರು ಉಂಟಾದರಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಮಾಹಿತಿ ನೀಡಿದಾಗ ಇದನ್ನು ಪರಿಹರಿಸುವಂತೆ ಸಚಿವ ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.







