ಶೀಘ್ರವೇ ಆರೋಪಿಗಳ ಬಂಧನ: ವಿ.ಎಂ. ಸುಧೀರನ್
ಪೆರಂಬವೂರು ದಲಿತ ವಿದ್ಯಾರ್ಥಿಯ ಹತ್ಯೆ ಪ್ರಕರಣ

ಕಾಸರಗೋಡು, ಮೇ 3: ಕೇರಳದ ಪೆರಂಬವೂರಿನಲ್ಲಿ ನಡೆದ ದಲಿತ ಸಮುದಾಯದ ಕಾನೂನು ವಿದ್ಯಾರ್ಥಿಯ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಕಾನೂನಿನ ಮುಂದೆ ತರಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್ ಹೇಳಿದ್ದಾರೆ.
ಮಂಗಳವಾರ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಜನಸಭಾ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಸುವಂತೆ ಗೃಹಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬಾಂಬ್ ತಯಾರಿ ರಾಜಕೀಯದಿಂದ ಸಿಪಿಎಂ ಹಿಂದೆ ಸರಿಯಬೇಕು. ನಾದಾಪುರದಲ್ಲಿ ಬಾಂಬ್ ತಯಾರಿ ಸಂದರ್ಭ ಬಾಂಬ್ ಸ್ಫೋಟಗೊಂಡು ಸಿಪಿಎಂ ಕಾರ್ಯಕರ್ತರೋರ್ವರು ಬಲಿಯಾಗಿದ್ದಾರೆ. ಇಂತಹ ಕೃತ್ಯದಿಂದ ಸಿಪಿಎಂ ಹಿಂದೆ ಸರಿಯಬೇಕು ಎಂದು ಹೇಳಿದರು.
ಬಿಜೆಪಿಯ ಬೆಳವಣಿಗೆ ತಡೆಯಲು ಸಿಪಿಎಂಗೆ ಸಾಧ್ಯವಿಲ್ಲ. ಸಿಪಿಎಂ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳಲು ಮುಂದಾಗುವ ಪಕ್ಷ. ಇಂತಹ ಹಲವಾರು ನಿದರ್ಶನಗಳು ನಮ್ಮ ಮುಂದಿದೆ. ಕಾಂಗ್ರೆಸ್ ವಿರೋಧದ ಹೆಸರಲ್ಲಿ ಬಿಜೆಪಿ ಬೆಳೆಯಲು ಸಿಪಿಎಂ ಪ್ರೋತ್ಸಾಹ ನೀಡುತ್ತಿದೆ ಎಂದರು.
ಬಿಜೆಪಿಗೆ ಖಾತೆ ತೆರೆಯಲು ಕಾಂಗ್ರೆಸ್ ಅವಕಾಶ ನೀಡದು. ಕೇರಳದಲ್ಲಿ ಐಕ್ಯರಂಗ ಮತ್ತು ಎಡರಂಗ ನಡುವೆ ಸ್ಪರ್ಧೆ ನಡೆಯುತ್ತಿದೆ. ಬಿಜೆಪಿ ಹೆಸರಿಗೆ ಮಾತ್ರ ಸ್ಪರ್ಧಿಸುತ್ತಿದೆ. ಕೋಮು ಭಾವನೆ ಕೆರಳಿಸಿ ಗೆಲ್ಲಲು ಪ್ರಯತ್ನ ನಡೆಸುತ್ತಿದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಕೆ. ಶ್ರೀಧರನ್, ಎಂ .ಸಿ. ಜೋಸ್ ಮತ್ತಿತರರು ಉಪಸ್ಥಿತರಿದ್ದರು.







