ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿದ್ಯಾರ್ಥಿ ಕಾರ್ಯಾಗಾರ

ಪುತ್ತೂರು, ಮೇ 3: ವಿದ್ಯಾರ್ಥಿ ಜೀವನದಲ್ಲಿ ಪ್ರಾಜೆಕ್ಟ್ ಎನ್ನುವುದು ಒಂದು ಸವಾಲಿನ ವಿಷಯ. ಸರಿಯಾಗಿ ಅರ್ಥೈಸಿಕೊಂಡು ಅದನ್ನು ಪೂರ್ಣಗೊಳಿಸಿದಾಗ ಸಿಗುವ ತೃಪ್ತಿ ಅವರ್ಣನೀಯ ಎಂದು ಸುರತ್ಕಲ್ ಎನ್‌ಐಟಿಕೆಯ ಲೋಹ ಮತ್ತು ವಸ್ತುವಿಜ್ಞಾನ ಇಂಜಿನಿಯರಿಂಗ್ ವಿಭಾಗದ ಪ್ರೊ. ಡಾ.ನಾರಾಯಣ ಪ್ರಭು ಹೇಳಿದ್ದಾರೆ.
ಇಲ್ಲಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ -2016 ನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹೊಸ ಹೊಸ ಆವಿಷ್ಕಾರಗಳನ್ನು ನಡೆಸುತ್ತಾ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಯಶಸ್ವಿಗೊಳಿಸಿ ಎಂದವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಬಲರಾಮ ಆಚಾರ್ಯ ಮಾತನಾಡಿ, ಪ್ರಾಯೋಗಿಕ ಅನುಭವಗಳು ವಿಷಯದ ಪೂರ್ಣ ತಿಳುವಳಿಕೆಗೆ ಸಹಕಾರಿ ಮತ್ತು ವೃತ್ತಿ ಜೀವನಕ್ಕೆ ಸಾಕಷ್ಟು ಉಪಕಾರಿಯಾಗುತ್ತದೆ ಎಂದು ಹೇಳಿದರು.
ಇಲ್ಲಿ ಮಂಡಿಸಲ್ಪಡುವ ಎಲ್ಲ ಪ್ರೌಢ ಪ್ರಬಂಧಗಳನ್ನು ಮುದ್ರಿಸಿ ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗಿದ್ದು, ನಾರಾಯಣ ಪ್ರಭು ಇದನ್ನು ಅನಾವರಣಗೊಳಿಸಿದರು.
ದೇಶಾದ್ಯಂತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದು, ಒಟ್ಟು 95 ಪ್ರಬಂಧಗಳು ಮಂಡಿಸಲ್ಪಡುತ್ತವೆ.
ಪ್ರಾಂಶುಪಾಲೆ ಪ್ರೊ.ಉಷಾ ಕಿರಣ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ. ಹರೀಶ್ ಎಸ್.ಆರ್. ವಂದಿಸಿದರು. ಉಪನ್ಯಾಸಕಿಯರಾದ ಪ್ರೊ. ನಿಶಾ ಜಿ.ಆರ್. ಮತ್ತು ಪ್ರೊ. ಜೋವಿಟಾ ಕಾರ್ಯಕ್ರಮ ನಿರೂಪಿಸಿದರು.







