ತ್ಯಾಜ್ಯ ವಿಲೇವಾರಿಗೆ ಆರ್ದ್ರಭೂಮಿಯ ಬಳಕೆ ಆತಂಕಕಾರಿ: ಜಾವಡೇಕರ್

ಹೊಸದಿಲ್ಲಿ,ಮೇ 3: ಆರ್ದ್ರ ಭೂಮಿಯ ಅತಿಕ್ರಮಣ ಮತ್ತು ತ್ಯಾಜ್ಯ ವಿಲೇವಾರಿಗಾಗಿ ಅದರ ಬಳಕೆಯು ಆತಂಕಕಾರಿಯಾಗಿದೆ ಎಂದು ಮಂಗಳವಾರ ಲೋಕಸಭೆಯಲ್ಲಿ ಹೇಳಿದ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು, ತ್ವರಿತ ನಗರೀಕರಣ ಮತ್ತು ಕೈಗಾರಿಕೀಕರಣದಿಂದ ಆರ್ದ್ರ ಭೂಮಿಯನ್ನು ರಕ್ಷಿಸಲು ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಆರ್ದ್ರ ಭೂಮಿ ಸಂರಕ್ಷಣಾ ಕಾರ್ಯಕ್ರಮದಡಿ 115 ತಾಣಗಳನ್ನು ಆರ್ದ್ರ ಪ್ರದೇಶಗಳೆಂದು ಗುರುತಿಸಲಾಗಿದ್ದು, ಇನ್ನಷ್ಟು ತಾಣಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.
ತ್ಯಾಜ್ಯವನ್ನು ಸುರಿಯಲು ಆರ್ದ್ರ ಪ್ರದೇಶವನ್ನು ಬಳಸುತ್ತಿರುವುದು ನಿಜಕ್ಕೂ ಆತಂಕವನ್ನು ಸೃಷ್ಟಿಸಿದೆ ಎಂದ ಅವರು, ಆರ್ದ್ರ ಪ್ರದೇಶ ನವೀಕರಣ ಯೋಜನೆಯು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ನೆರವಾಗಲಿದೆ ಎಂದರು.
ದೇಶದಲ್ಲಿ ಗುರುತಿಸಲಾಗಿರುವ ಆರ್ದ್ರ ಪ್ರದೇಶಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಜ್ಯಗಳು ಮತ್ತು ಇತರ ಸಂಸ್ಥೆಗಳಿಗೆ 146.94 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.





