ಮಂಜೇಶ್ವರದಲ್ಲಿ 2006ರ ಫಲಿತಾಂಶ ಪುನರಾವರ್ತನೆ: ಎಡರಂಗ ಅಭ್ಯರ್ಥಿ ಸಿ.ಎಚ್. ಕುಂಞಂಬು ವಿಶ್ವಾಸ

ಮೇ 16 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ರಂಗ ಸಜ್ಜಾಗಿದೆ. ಕೇರಳ ಕರ್ನಾಟಕ ಗಡಿ ಕ್ಷೇತ್ರ ಮಂಜೇಶ್ವರದಲ್ಲಿ ಸುಡುವ ಬಿಸಿಲಿನ ಜೊತೆ ಜೊತೆಗೆ ನಿಧಾನವಾಗಿ ಚುನಾವಣಾ ಕಾವು ಏರುತ್ತಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಎಲ್ಡಿಎಫ್ ಅಭ್ಯರ್ಥಿ, ಮಾಜಿ ಶಾಸಕ ಸಿ. ಎಚ್. ಕುಂಞಂಬು ಚುನಾವಣಾ ಪ್ರಚಾರದ ನಡುವೆಯೇ ‘ವಾರ್ತಾ ಭಾರತಿ’ ಯೊಂದಿಗೆ ಮಾತನಾಡಿದರು. ಅದರ ಆಯ್ದ ಭಾಗ ಇಲ್ಲಿದೆ.
ವಾರ್ತಾಭಾರತಿ: ಹೇಗಿದೆ ನಿಮ್ಮ ಚುನಾವಣಾ ಪ್ರಚಾರ ?
ಕುಂಞಂಬು: ನಾನು ಕಳೆದ 45 ದಿನಗಳಿಂದ ಕ್ಷೇತ್ರದ 8 ಪಂಚಾಯತ್‌ಗಳಿಗೆ ಹಾಗೂ 167 ಬೂತ್‌ಗಳಿಗೆ ಭೇಟಿ ನೀಡಿದ್ದೇನೆ. ಎಲ್ಲೆಡೆ ಜನರಿಂದ ನನಗೆ ಅತ್ಯುತ್ತಮ ಪ್ರತಿಕ್ರಿಯೆ, ಬೆಂಬಲ ವ್ಯಕ್ತವಾಗಿದೆ. ಈ ಬಾರಿಯ ವಿಶೇಷತೆ ಏನೆಂದರೆ, 2006ರಂತೆ ಈ ಬಾರಿ ನನಗೆ ಮುಸ್ಲಿಮರು ಒಗ್ಗಟ್ಟಾಗಿ ಬೆಂಬಲ ನೀಡುತ್ತಿದ್ದಾರೆ. (ಮುಸ್ಲಿಂ ) ಲೀಗ್‌ಗೆ ಸೇರಿದವರು ಬಿಟ್ಟರೆ ಉಳಿದೆಲ್ಲ ಸಂಘಟನೆಗಳ ಮುಸ್ಲಿಮರು ಈ ಬಾರಿ ಎಡರಂಗವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಹಿರಿಯ ಧಾರ್ಮಿಕ ನಾಯಕ ಎ.ಪಿ. ಉಸ್ತಾದ್‌ರು ನನ್ನನ್ನು ಬೆಂಬಲಿಸಿ, ಗೆಲ್ಲಿಸುವಂತೆ ಕರೆ ನೀಡಿದ್ದಾರೆ. ಅವರನ್ನು ನಮ್ಮ ರಾಜ್ಯ ನಾಯಕರು ಭೇಟಿಯಾಗಿದ್ದಾರೆ. ವಿಶೇಷವಾಗಿ ಮಂಜೇಶ್ವರದಲ್ಲಿ ನನ್ನನ್ನು ಗೆಲ್ಲಿಸಬೇಕೆಂದು ಅವರು ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಪ್ರಾಬಲ್ಯವನ್ನು ಹೆಚ್ಚಿಸಿದ್ದು ಜಯದ ಸಂಪೂರ್ಣ ವಿಶ್ವಾಸವಿದೆ. ‘ಈ ಬಾರಿ ಮಂಜೇಶ್ವರದಲ್ಲಿ ಕಷ್ಟವಿದೆ’ ಎಂದು ಸ್ವತ: (ಮುಸ್ಲಿಂ) ಲೀಗ್ ನಾಯಕರೇ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಇತ್ತೀಚಿಗೆ ಟಿವಿಯಲ್ಲಿ ವರದಿಯಾಗಿದೆ.
ವಾರ್ತಾಭಾರತಿ: ಹಾಲಿ ಶಾಸಕ ಹಾಗೂ ಯುಡಿಎಫ್ ಅಭ್ಯರ್ಥಿ ಪಿ.ಬಿ. ಅಬ್ದುರ್ರಝಾಕ್‌ರ ಸೇವಾವಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಕುಂಞಂಬು: ಕಳೆದ ಐದು ವರ್ಷಗಳ ಅವರ ಶಾಸಕತ್ವದ ಅವಧಿ ಮಂಜೇಶ್ವರ ಕ್ಷೇತ್ರದ ಪಾಲಿಗೆ ಬಹುದೊಡ್ಡ ನಷ್ಟ ತಂದಿದೆ. ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತರದ ಅವರು ಕ್ಷೇತ್ರವನ್ನು ಹಿಂದಕ್ಕೆ ಒಯ್ದಿದ್ದಾರೆ. ಕೆಲವು ನನ್ನ ಅವಧಿಯಲ್ಲೇ ಮಂಜೂರಾದ ಕಾಮಗಾರಿಗಳನ್ನು ಬಿಟ್ಟರೆ ಬೇರಾವುದೇ ಕೆಲಸ ಮಾಡಿಲ್ಲ. ಇದನ್ನು ಕ್ಷೇತ್ರದ ಜನ ಸರಿಯಾಗಿ ಗುರುತಿಸಿದ್ದಾರೆ. ಮಂಜೇಶ್ವರ ಚೆಕ್‌ಪೋಸ್ಗಾಗಿ ನಮ್ಮ ಸರಕಾರ ಇರುವಾಗ 9.5 ಎಕರೆ ಜಾಗ ಸ್ವಾಧೀನ ಮಾಡಿದ್ದೆವು. ಆದರೆ ಯುಡಿಎಫ್ ಸರಕಾರ ಆ ಬಗ್ಗೆ ಕಾರ್ಯಪ್ರವೃತ್ತವಾಗದೆ ಇದ್ದುದರಿಂದ ಕಳೆದ ಐದು ವರ್ಷಗಳಲ್ಲಿ 25 ಜನ ಮೃತಪಟ್ಟಿದ್ದಾರೆ. ಇದಕ್ಕೆ ಅವರು ಈ ಚುನಾವಣೆಯಲ್ಲಿ ಬೆಲೆ ತೆರಲಿದ್ದಾರೆ. ನನ್ನ ಅವಧಿಯಲ್ಲಿ ನಾನು ಮಾಡಿದ ರಸ್ತೆ, ಸೇತುವೆ ಕಾಮಗಾರಿಗಳು ಶಿಕ್ಷಣ ಸಂಸ್ಥೆಗಳಿಗೆ , ಧಾರ್ಮಿಕ ಸಂಸ್ಥೆಗಳಿಗೆ ಮಾಡಿ ಕೊಟ್ಟ ಕೆಲಸಗಳು, ಮಂಜೂರು ಮಾಡಿರುವ ಅನುದಾನ , ತುಳು ಅಕಾಡಮಿ ಸ್ಥಾಪನೆ ಇತ್ಯಾದಿ ಹಲವಾರು ಜನಪರ ಕೆಲಸಗಳನ್ನು ಕ್ಷೇತ್ರದ ಜನತೆ ಇಂದಿಗೂ ನೆನೆದು ಧನ್ಯವಾದ ಹೇಳುತ್ತಾರೆ. ಇಡೀ ಕಾಸರಗೋಡು ಜಿಲ್ಲೆಯಲ್ಲಿ ಕೇಂದ್ರ ರಸ್ತೆ ನಿಧಿ (ಸೆಂಟ್ರಲ್ ರೋಡ್ ಫಂಡ್) ಯಿಂದ ರಸ್ತೆ ಮಂಜೂರು ಮಾಡಿ ಮಂಜೇಶ್ವರ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಬಾರಿ ಮತ್ತೆ ಅವರು 2011ರ ತಪ್ಪುಆಗಲು ಬಿಡುವುದಿಲ್ಲ. ಹಾಗಾಗಿ ಈ ಬಾರಿ ಯುಡಿಎಫ್‌ನ್ನು ಕ್ಷೇತ್ರದ ಜನತೆ ತಿರಸ್ಕರಿಸುವುದು ಖಚಿತ.
ವಾರ್ತಾ ಭಾರತಿ: ಬಿಜೆಪಿ ಈ ಬಾರಿ ಮಂಜೇಶ್ವರದಲ್ಲಿ ಬಲವರ್ಧನೆ ಮಾಡಿಕೊಂಡಿದೆ ಎಂಬ ಅಭಿಪ್ರಾಯವಿದೆ. ಇಲ್ಲಿಂದಲೇ ಅದು ಖಾತೆ ತೆರೆಯಬಹುದೇ?
ಕುಂಞಂಬು: ಇದು ಮುಸ್ಲಿಂ ಲೀಗ್ ಮಾಡುತ್ತಿರುವ ಅಪಪ್ರಚಾರ. ಈ ಬಾರಿಯ ಬಿಜೆಪಿ ಅಭ್ಯರ್ಥಿಯ ಬಗ್ಗೆ ಕಟ್ಟಾ ಬಿಜೆಪಿ ಬೆಂಬಲಿಗರಿಗೇ ಅಸಮಾಧಾನವಿದೆ. ಕ್ಷೇತ್ರದ ಕನ್ನಡಿಗ ಮತದಾರರಲ್ಲಿ ಸಾಕಷ್ಟು ಸಂಖ್ಯೆಯ ಜನ ಹಲವಾರು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಈವರೆಗೆ ಅವರಿಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿಲ್ಲ. ಪ್ರತಿ ಚುನಾವಣೆಯಲ್ಲೂ ಬೇರೆ ಕಡೆಯಿಂದ ಕರೆತಂದ ಸುರೇಂದ್ರನ್ ಬಂದು ನಿಂತು ಸೋತು ಹೋಗುತ್ತಾರೆ. ಮತ್ತೆ ಮುಂದಿನ ಚುನಾವಣಾ ಸಂದರ್ಭದಲ್ಲಿ ಬರುತ್ತಾರೆ. ಇದರಿಂದ ಕನ್ನಡಿಗರಿಗೆ ಬಿಜೆಪಿ ಬಗ್ಗೆ ಭ್ರಮ ನಿರಸನವಾಗಿದೆ. ಅವರೂ ಈ ಬಾರಿ ನಮ್ಮ ಕೈ ಹಿಡಿಯುತ್ತಾರೆ. ಇದು ನಮಗೆ ಪ್ಲಸ್ ಪಾಯಿಂಟ್ . ಇನ್ನು ಇಲ್ಲಿಂದ ಮಾತ್ರವಲ್ಲ, ಈ ಬಾರಿಯೂ ಬಿಜೆಪಿ ಇಡೀ ಕೇರಳದಲ್ಲಿ ಒಂದೇ ಒಂದು ಸ್ಥಾನ ಗಳಿಸುವುದಿಲ್ಲ. ಅವರಿಗೆ ಸೊನ್ನೆಯೇ ಗತಿ.
ವಾರ್ತಾಭಾರತಿ: ನೀವು ಕಳೆದ ಬಾರಿ ಮೂರನೆ ಸ್ಥಾನಕ್ಕೆ ಇಳಿದಿದ್ದೀರಿ. ಈ ಬಾರಿ ಗೆಲ್ಲುವ ಭರವಸೆಯನ್ನು ಅದು ಹೇಗೆ ವ್ಯಕ್ತಪಡಿಸುತ್ತಿದ್ದೀರಿ?
ಕುಂಞಂಬು: ನೋಡಿ, 2006 ರಲ್ಲಿ ನಾವು ಮೂರನೆ ಸ್ಥಾನದಿಂದಲೇ ಮೊದಲ ಸ್ಥಾನಕ್ಕೆ ಬಂದಿದ್ದು. ಈಗ ಮತ್ತೆ ಅದೇ ಮರುಕಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೀಡಿದ ಅಚ್ಛೇ ದಿನ್ ಭರವಸೆ ಕೇವಲ ಕಾಗದದ ಮೇಲಿದೆ ಎಂಬುದನ್ನು ಜನರು ಮನಗಂಡಿದ್ದಾರೆ. ಕೇಂದ್ರ ಸರಕಾರ ಜನಸಾಮಾನ್ಯರ ಬದುಕು ದುಸ್ತರ ಮಾಡಿದೆ. ಇನ್ನು ರಾಜ್ಯದ ಯುಡಿಎಫ್ ಸರಕಾರದ ದುರಾಡಳಿತ , ಭ್ರಷ್ಟಾಚಾರ ಇಡೀ ದೇಶದಲ್ಲಿ ಕೇರಳದ ಘನತೆಗೆ ಧಕ್ಕೆ ತಂದಿದೆ. ಇದರ ಪರಿಣಾಮವನ್ನು ಯುಡಿಎಫ್ ಅನುಭವಿಸಲಿದೆ. ಈ ಬಾರಿ ಎಡರಂಗವನ್ನು ಬೆಂಬಲಿಸಲು ಜನತೆ ನಿರ್ಧರಿಸಿಯಾಗಿದೆ. ಕ್ಷೇತ್ರದಲ್ಲಿ ಸುಮಾರು 2 ಲಕ್ಷ 8 ಸಾವಿರ ಮತದಾರರಿದ್ದಾರೆ. 75 ಶೇ.ಮತದಾನ ನಡೆದರೆ ಸುಮಾರು 1,60,000 ಮತ ಚಲಾವಣೆಯಾಗುತ್ತದೆ. ಎಡರಂಗದ ಕಟ್ಟಾ ಮತದಾರರ ಜೊತೆ ಮುಸ್ಲಿಮರು, ಕ್ರೈಸ್ತರ, ಕನ್ನಡಿಗ ಹಿಂದೂಗಳ ಬೆಂಬಲ ಈ ಬಾರಿ ನಮಗಿದೆ. ಹಾಗಾಗಿ ನಾವು 55 ರಿಂದ 60 ಸಾವಿರ ಮತ ಪಡೆದು ಗೆಲ್ಲುವುದು ಖಚಿತ.
ವಾರ್ತಾಭಾರತಿ: ಎಡರಂಗದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಗೊಂದಲವಿದೆಯೇ?
ಕುಂಞಂಬು: ಯಾವುದೇ ಗೊಂದಲಕ್ಕೆ ಆಸ್ಪದವೇ ಇಲ್ಲ. ನಮ್ಮಲ್ಲಿ ಇಬ್ಬರು ಅತ್ಯಂತ ಹಿರಿಯ ಮುಖಂಡರಿದ್ದಾರೆ. ಅದರಲ್ಲಿ ವಿ.ಎಸ್. ಅಚ್ಯುತಾನಂದನ್‌ರಿಗೆ ಈಗ 94 ವರ್ಷ ವಯಸ್ಸು. ಪಿಣರಾಯಿ ವಿಜಯನ್‌ರಿಗೆ 73 ವರ್ಷ. ಹಾಗಾಗಿ ಪಕ್ಷ ಅಧಿಕಾರಕ್ಕೆ ಬಂದಾಗ ಅವರಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದು ಸಹಜವಾಗಿ ಎಲ್ಲರಿಗೂ ಗೊತ್ತಾಗುವ ವಿಷಯ. ಆದರೆ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಈ ಬಾರಿ ನಾವು 90 ಕ್ಕೂ ಹೆಚ್ಚು ಸ್ಥಾನ ಗಳಿಸುವುದು ಖಚಿತ. ಹಾಗಾಗಿ ಈ ಅಂಶ ಕೂಡ ನಮ್ಮ ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರಲಿದೆ. ಸರಕಾರ ರಚಿಸುವ ಪಕ್ಷದ ಶಾಸಕರು ಇರಲಿ ಎಂದು ಜನ ಬಯಸುವುದು ಸ್ವಾಭಾವಿಕ.







