ಪಾಕ್ ತಂಡದಲ್ಲಿ ಪ್ರತಿಭಾವಂತರ ಕೊರತೆಯಿದೆ: ಅಫ್ರಿದಿ ಆತಂಕ

ಕರಾಚಿ, ಮೇ 3: ಪಾಕಿಸ್ತಾನ ಕ್ರಿಕೆಟ್ ಭವಿಷ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸಿರುವ ಪಾಕ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಪಿಸಿಬಿ ಬೇರು ಮಟ್ಟದಲ್ಲಿ ಕ್ರಿಕೆಟಿಗರನ್ನು ಬೆಳೆಸುವತ್ತ ಗಮನ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಏಷ್ಯಾಕಪ್ ಹಾಗೂ ವಿಶ್ವಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಅಫ್ರಿದಿ ಕಳೆದ ತಿಂಗಳು ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಪಾಕಿಸ್ತಾನದ ದೇಶೀಯ ಮಟ್ಟದಲ್ಲಿ ಪ್ರತಿಭಾವಂತ ಆಟಗಾರರು ಇಲ್ಲದಿರುವ ಬಗ್ಗೆ ಅಫ್ರಿದಿ ಆತಂಕವ್ಯಕ್ತಪಡಿಸಿದ್ದಾರೆ.
''ಇದೀಗ ಪಾಕ್ ತಂಡದಲ್ಲಿ ಪ್ರತಿಭಾವಂತರ ಕೊರತೆಯಿದೆ. ನಾನು ನಿರ್ದಿಷ್ಟವಾಗಿ ಯಾವ ಯುವ ಆಟಗಾರನನ್ನು ಬೆಟ್ಟು ಮಾಡಲಾರೆ. ಕ್ರಿಕೆಟ್ ಮಂಡಳಿಯು ಶಾಲಾ ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡಬೇಕು. ತಳ ಮಟ್ಟದಲ್ಲಿ ಕ್ರಿಕೆಟಿಗರನ್ನು ಬೆಳೆಸಬೇಕಾಗಿದೆ'' ಎಂದು ಅಫ್ರಿದಿ ಸಲಹೆ ನೀಡಿದರು.
ಇಂಗ್ಲೆಂಡ್ ಪ್ರವಾಸಕ್ಕೆ ತಯಾರಿ ನಡೆಸಲು ತಿಂಗಳು ಕಾಲ ನಡೆಯಲಿರುವ ತರಬೇತಿ ಶಿಬಿರಕ್ಕೆ ಆಯ್ಕೆ ಸಮಿತಿಯು ಅಫ್ರಿದಿ ಅವರನ್ನು ತಂಡದಿಂದ ಹೊರಗಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅಫ್ರಿದಿ, ''ನಾನು ಇದೀಗ ಟ್ವೆಂಟಿ-20 ಕ್ರಿಕೆಟ್‌ನತ್ತ ಮಾತ್ರ ಗಮನ ನೀಡುವೆ. ಈ ಋತುವಿನಲ್ಲಿ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವುದಾಗಿ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದೇನೆ. ಅಹ್ಮದ್ ಶಹಝಾದ್ ಹಾಗೂ ಉಮರ್ ಅಕ್ಮಲ್‌ರನ್ನು ತಂಡದಿಂದ ಯಾಕೆ ಕೈಬಿಟ್ಟಿದ್ದಾರೆಂದು ಗೊತ್ತಿಲ್ಲ'' ಎಂದಿದ್ದಾರೆ.







