ಐಟಿಐ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್: ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ

ಬೆಂಗಳೂರು, ಮೇ 3: ರಾಜ್ಯದಲ್ಲಿರುವ ಎಲ್ಲ ಸರಕಾರಿ ಐಟಿಐ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 23 ಸಾವಿರ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ತಿಳಿಸಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿಪಿಟಿ-ಟಿಎಸ್ಪಿ ಯೋಜನೆಯಲ್ಲಿ ದಲಿತ ಸಮುದಾಯಕ್ಕೆ ಮೀಸಲಿರುವ ಹಣದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ಒದಗಿಲಾಗುವುದು. ಪ್ರಸಕ್ತ ಸಾಲಿನಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಐಟಿಐ ವಿದ್ಯಾರ್ಥಿಗಳಿಗೆ ಭಾಷಾ ಕೌಶಲ್ಯ ಹೆಚ್ಚಿಸುವ ಸಲುವಾಗಿ ಇಂಗ್ಲಿಷ್ ಮೆಂಟರ್ ಎಂಬ ಹೊಸ ಕೋರ್ಸ್ ಆರಂಭಿಸಲಾಗುತ್ತಿದೆ. ಇದರಿಂದ ಐಟಿಐ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯದ ಜೊತೆಗೆ ಸಂವಹನ ಕಲೆ ವೃದ್ಧಿಯಾಗಲಿದೆ. ಐಟಿಐ ತರಬೇತಿಯ ಜತೆಗೆ ದಿನಕ್ಕೆ ಒಂದು ಗಂಟೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ನ್ನು ಹೇಳಿಕೊಡಲಾಗುವುದು. ಇದಕ್ಕಾಗಿ ಆಟೋಮೆಟಿಕ್ ಇಂಗ್ಲಿಷ್ ಕಿಟ್ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕನಿಷ್ಠ ವೇತನ ನೀತಿಯನ್ನು 27 ಉದ್ಯಮಗಳಲ್ಲಿ ಜಾರಿಗೊಳಿಸಲಾಗಿದ್ದು, ಮುದ್ರಣ, ಕೋಳಿ ಸಾಕಣೆೆ ಸೇರಿದಂತೆ ನಾಲ್ಕು ಉದ್ಯಮಗಳ ಕನಿಷ್ಠ ವೇತನ ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ. ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಕಾರ್ಮಿಕರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ಮೇ 6ರಂದು ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ಉದ್ಯಮಿಗಳ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದು ಪರಮೇಶ್ವರ್ ನಾಯಕ್ ಹೇಳಿದರು.
ನಿರುದ್ಯೋಗಿಗಳಿಗೆ ಅಗತ್ಯ ತರ ಬೇತಿ ನೀಡಿ ಕೆಲಸ ಕೊಡಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿ ಎಚ್‌ಆರ್‌ಡಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈಗಾಗಲೇ 12 ಜಿಲ್ಲೆಗಳಲ್ಲಿ ಈ ಕೇಂದ್ರಗಳು ಅಸ್ತಿತ್ವಕ್ಕೆ ಬಂದಿವೆ. ಉಳಿದ ಜಿಲ್ಲೆಗಳಲ್ಲಿ ತಿಂಗಳಾಂತ್ಯಕ್ಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರಾಜ್ಯದಲ್ಲಿರುವ ಎಲ್ಲ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವುದು ಸರಕಾರದ ಮುಂದಿನ ಗುರಿಯೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರ ನಿಧಿಯಲ್ಲಿ 4 ಸಾವಿರ ಕೋಟಿ ರೂ. ಹೆಚ್ಚಿನ ಹಣ ಇದೆ. ಇದನ್ನು ಬಳಸಿಕೊಂಡು 350 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾರ್ಮಿಕರ ಕೌಶಲ್ಯಾಭಿವೃದ್ಧಿ ಅಕಾಡಮಿ ಸ್ಥಾಪಿಸಲಾಗಿದೆ. ಈ ಕೇಂದ್ರವನ್ನು ಇದೇ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಳಿದಂತೆ 12 ಕಲ್ಯಾಣ ಕಾರ್ಯಕ್ರಮಗಳ ಮೂಲಕ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲು 200 ಬಸ್‌ಗಳನ್ನು ನೀಡಲು ಸರಕಾರ ಸಿದ್ಧವಿತ್ತು. ಆದರೆ, ಕಾರ್ಮಿಕ ಮಹಿಳಾ ಸಂಘಟನೆಗಳೇ ಇದಕ್ಕೆ ಕಾಲಾವಕಾಶ ಕೇಳಿವೆ. ಹೀಗಾಗಿ ಇದನ್ನು ತಡೆಹಿಡಿಯಲಾಗಿದೆ. ಶೀಘ್ರವೇ ಸಂಘಟನೆಗಳ ಜತೆ ಚರ್ಚೆ ಮಾಡಿ ಪ್ರತ್ಯೇಕ ಸಾರಿಗೆ ವ್ಯವಸ್ಥೆಯನ್ನು ಆರಂಭಿಸುವುದಾಗಿ ಅವರು ಹೇಳಿದರು.
ದೌರ್ಜನ್ಯಕ್ಕೊಳಗಾದ ಮಹಿಳೆಯರು ಕಾರ್ಖಾನೆಗಳಲ್ಲಿರುವ ದೂರು ಪೆಟ್ಟಿಗೆಯಲ್ಲಿ ತಮ್ಮ ಅಹವಾಲು ಹಾಕಬಹುದು. ಅದನ್ನು ಆಡಳಿತ ಮಂಡಳಿಗಳ ಬದಲು ಕಾರ್ಮಿಕ ಇಲಾಖೆ ಅಧಿಕಾರಿಗಳೇ ತೆಗೆದು ನೋಡುವಂತಹ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗಿದೆ. ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಸರಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪರಮೇಶ್ವರ್ ನಾಯ್ಕೆ ತಿಳಿಸಿದರು.
ಗಾರ್ಮೆಂಟ್ಸ್ ಹಾಗೂ ಇತರೆ ಉದ್ಯಮಗಳಲ್ಲಿ ಲೈಂಗಿಕ ಕಿರುಕುಳ ಗಳು ನಡೆದರೆ ನೇರವಾಗಿ ತಮಗೆ ದೂರು ನೀಡಬಹುದು. ನನ್ನ ದೂರವಾಣಿ ಸಂಖ್ಯೆ 9448120755 ಇದಕ್ಕೆ ಕರೆ ಮಾಡಿ ತಮ ಗಾದ ಅನ್ಯಾಯದ ಕುರಿತು ನನ್ನ ಜೊತೆ ಮಾತನಾಡಬಹುದು. ಮುಂದಿನ ದಿನಗಳಲ್ಲಿ ಮಹಿಳಾ ಕಾರ್ಮಿಕರಿಗಾಗಿ ಪ್ರತ್ಯೇಕ ಸಹಾಯವಾಣಿ ಆರಂಭಿಸಲಾಗುವುದು.
- ಪರಮೇಶ್ವರ ನಾಯ್ಕ, ಕಾರ್ಮಿಕ ಸಚಿವ







