ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನ: ಯಡಿಯೂರಪ್ಪ
ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಮೇ 3: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರ ಹಿಡಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.
ಮಂಗಳವಾರ ನಗರದ ಕಂಠೀರವ ಕ್ರೀಡಾಂಗಣ ಎದುರು ಬಿಜೆಪಿ ಹಮ್ಮಿ ಕೊಂಡಿದ್ದ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಬಿಬಿಎಂಪಿ ಮುತ್ತಿಗೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕರು ಈಗಾಗಲೇ ಟೀಕಿಸುತ್ತಿದ್ದಾರೆ. ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆಯಲಿದೆ ಎಂದರು.
ರಾಜ್ಯ ಸರಕಾರ ಈಗಾಗಲೇ ಸಾರಿಗೆ, ವಿದ್ಯುತ್, ಹಾಲು, ನೀರಿನ ದರವನ್ನು ಹೆಚ್ಚಳ ಮಾಡಿದೆ. ಇದೀಗ ಮನಸೋ ಇಚ್ಛೆ ಆಸ್ತಿ ತೆರಿಗೆ ಹೆಚ್ಚಳ ಮಾಡಲು ನಿಂತಿದೆ. ಈ ಬಗ್ಗೆ ಬಿಜೆಪಿ ಹೋರಾಟ ಮಾಡದೆ ಹೋದರೆ ನಗರದ ಜನತೆಗೆ ಶೇ.100 ರಿಂದ 200ರಷ್ಟು ತೆರಿಗೆ ಹೆಚ್ಚಳ ಮಾಡಲಾಗುತ್ತದೆ. ಇದಕ್ಕೆ ಬಿಜೆಪಿ ಪಕ್ಷ ಅವಕಾಶ ಮಾಡಿಕೊಡುವುದಿಲ್ಲ ಎಂದು ನುಡಿದರು.
ಅಸಮರ್ಪಕ ಕಸವಿಲೇವಾರಿಯಿಂದ ಇಡೀ ನಗರ ಸ್ವಚ್ಛತೆಯನ್ನು ಕಳೆದುಕೊಳ್ಳುವ ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆ ನಿವಾರಿಸುವುದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಯರ್ ಮಂಜುನಾಥರೆಡ್ಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಬಿಎಂಪಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ದಕ್ಷ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ದರ್ಬಾರ್ ನಡೆಸಲಾಗುತ್ತಿದೆ. ರಾಜ್ಯ ಸರಕಾರದ ದುರಾಡಳಿತವನ್ನು ಕಡೆಗಾಣಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದ ಅವರು, ರಾಜ್ಯದ ಹಲವೆಡೆ ತಾನು ಬರ ಪರಿಸ್ಥಿತಿ ಪರಿಶೀಲಿಸಿದ್ದು, ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸರಕಾರ ಹೇಡಿ ಸರಕಾರ, ಕೌನ್ಸಿಲ್‌ನಲ್ಲೂ ಕೂಡ ಆ ಪಕ್ಷದವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾನೂನಿನಲ್ಲಿ ಅಧಿಕಾರ ಇಲ್ಲದಿದ್ದರೂ ವಿರೋಧ ಪಕ್ಷದ ನಾಯಕನನ್ನು ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಾಯಲು ಸಿದ್ಧ: ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಬೆಂಗ ಳೂರಿನ ಜನತೆಗಾಗಿ ನಾವು ಸಾಯಲು ಸಿದ್ಧ ಎಂದು ಘೋಷಣೆ ಮಾಡಿದರು.
ಕಳೆದ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್‌ಗೆ ಸಂಖ್ಯಾಬಲ ಇಲ್ಲದೆ ಇದ್ದರೂ ನಮ್ಮನ್ನು ಅಮಾನತು ಮಾಡಿದ್ದಾರೆ. ಇದು ಮೇಯರ್ ಮಂಜುನಾಥರೆಡ್ಡಿಯವರ ಗೂಂಡಾಗಿರಿಯ ತಾಜಾ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರ ಬಂಧನ: ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಆರ್.ಅಶೋರ್, ವಿ. ಸೋಮಣ್ಣ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ವಿಜಯಕುಮಾರ್, ಮುನಿರಾಜು, ತಾರಾ ಅನುರಾಧ, ನಾರಾಯಣಸ್ವಾಮಿ, ಸುಬ್ಬಣ್ಣ, ಪದ್ಮನಾಭರೆಡ್ಡಿ ಮತ್ತಿತರರು ಕಂಠೀರವ ಸ್ಟೇಡಿಯಂನಿಂದ ಹೊರಟು ಬಿಬಿಎಂಪಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಇವರನ್ನು ತಡೆಯಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಇದನ್ನು ಮನಗಂಡು ಪೊಲೀಸರು ಈ ಎಲ್ಲ ಮುಖಂಡರನ್ನು ಬಂಧಿಸಿದರು. ಇಪ್ಪತ್ತು ಸಾವಿರ: ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬಿಬಿಎಂಪಿ ಮುತ್ತಿಗೆ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಂಠೀರವ ಸ್ಟೇಡಿಯಂ ಸಮೀಪ ನಗರದ ವಿವಿಧ ಮೂಲೆಗಳಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು, ಜೊತೆಗೆ ಸಾರ್ವಜನಿಕರು ಸೇರಿದ್ದರಿಂದ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಸಂಚಾರ ದಟ್ಟಣೆ:
ಸಾವಿರಾರು ಮಂದಿ ಜಮಾವಣೆಗೊಂಡಿದ್ದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಬಹಳ ಸಮಯದವರೆಗೆ ಪರದಾಡಬೇಕಾಯಿತು. ಕೆ.ಆರ್‌ವೃತ್ತ, ವೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಡಬ್ಬಲ್ ರೋಡ್, ಎಂ.ಜಿ.ರಸ್ತೆ, ಸಂಪಂಗಿರಾಮನಗರ ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೈಲುದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು.







