ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಗೆ ನ್ಯಾ. ನಾಯಕ್ ಹೆಸರು ತಿರಸ್ಕರಿಸಿದ ರಾಜ್ಯಪಾಲ ವಜುಭಾಯಿ ವಾಲಾ?
ಬೆಂಗಳೂರು, ಮೇ 3: ಲೋಕಾಯುಕ್ತ ಸ್ಥಾನಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದ್ದ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.
ವಿಪಕ್ಷಗಳು, ಸಾರ್ವಜನಿಕರ ತೀವ್ರ ವಿರೋಧವನ್ನು ಲೆಕ್ಕಿಸದೆ ಕರ್ನಾಟಕ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ಹೆಸರನ್ನು ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ಶಿಫಾರಸು ಮಾಡಿತ್ತು. ನ್ಯಾ.ನಾಯಕ್ ವಿರುದ್ಧವೂ ಕೆಲ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಹೆಸರನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಉಪ ಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾ.ಕೆ.ಎಲ್.ಮಂಜುನಾಥ್ ಹೆಸರನ್ನು ಸರಕಾರ ಶಿಫಾರಸು ಮಾಡಿದ ವೇಳೆ ರಾಜ್ಯಪಾಲರು ತಿರಸ್ಕರಿಸಿದ್ದರು. ಇದೀಗ ನ್ಯಾ.ನಾಯಕ್ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿರುವುದರಿಂದ ಸರಕಾರಕ್ಕೆ ಮತ್ತೆ ತಲೆನೋವು ಆರಂಭವಾದಂತಾಗಿದೆ.
ನ್ಯಾ.ನಾಯಕ್ ಅವರ ಹೆಸರು ತಿರಸ್ಕರಿಸಲು ಸೂಕ್ತ ಕಾರಣಗಳೊಂದಿಗೆ ಸುದೀರ್ಘ ಪತ್ರವೊಂದನ್ನು ರಾಜ್ಯ ಸರಕಾರಕ್ಕೆ ಬರೆದಿರುವ ರಾಜ್ಯಪಾಲರು, ನಾಯಕ್ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡುವ ವೇಳೆ ಅವರ ಮೇಲಿರುವ ಆರೋಪಗಳನ್ನು ಪರಿಗಣಿಸಿಲ್ಲ. ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಗಳೇ ಈ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಸರಕಾರ ಯಾವ ಕಾರಣಕ್ಕಾಗಿ ಅವರ ಹೆಸರನ್ನು ಶಿಫಾರಸು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.
ನ್ಯಾ.ಎಸ್.ಆರ್.ನಾಯಕ್ ಲೋಕಾ ಯುಕ್ತ ಹುದ್ದೆಗೆ ಸೂಕ್ತರೇ ಎಂಬುದನ್ನು ಸರಕಾರ ಶಿಫಾರಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿಲ್ಲ. ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ ನೇಮಕ ಮಾಡುವ ವೇಳೆ ವ್ಯಕ್ತಿಯ ಪೂರ್ವಾಪರವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಬೇಕಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.





