ಕ್ಯಾಪಿಟೇಶನ್ ಶುಲ್ಕ ಅಕ್ರಮ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 3: ಖಾಸಗಿ ಶಿಕ್ಷಣ ಸಂಸ್ಥೆಗಳ ಕ್ಯಾಪಿಟೇಶನ್ ಶುಲ್ಕ ಪದ್ಧತಿ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಶಿಕ್ಷಣ ವಲಯದಲ್ಲಿ ವಾಣಿಜ್ಯೀಕರಣ ಹಾಗೂ ಶೋಷಣೆಗೆ ಅವಕಾಶವಿಲ್ಲ. ಶಿಕ್ಷಣ ಸಂಸ್ಥೆಗಳು ಲಾಭವೂ ಇಲ್ಲ- ನಷ್ಟವೂ ಇಲ್ಲ ಎಂಬ ಆಧಾರದಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಎ.ಆರ್.ದವೆ, ಎ.ಕೆ.ಸಿಕ್ರಿ, ಆರ್.ಕೆ.ಅಗರ್‌ವಾಲ್, ಎ.ಕೆ.ಗೋಯಲ್ ಹಾಗೂ ಆರ್.ಭಾನುಮತಿ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠ, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಲಾಭ ಮಾಡುವುದಲ್ಲ. ಸರಕಾ ರ ಈ ಬಗ್ಗೆ ಗಮನ ಹರಿಸಿ, ಅದನ್ನು ನಿರ್ಬಂಧಿಸುವ ಮೂಲಕ ಪ್ರತಿಭೆಗಳ ಉತ್ತೇಜನಕ್ಕೆ ಮುಂದಾಗಬೇಕು. ಅವ್ಯವಹಾರಗಳನ್ನು ತಡೆದು ಪ್ರತಿಭಾವಂತರು ಸುಲಭವಾಗಿ ಪ್ರವೇಶ ಪಡೆಯುವಂತೆ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸ್ಪಷ್ಟಪಡಿಸಿದೆ.
ಶಿಕ್ಷಣವನ್ನು ಇಂದು ವೃತ್ತಿಯಾಗಿ ಪರಿಗಣಿಸಲಾಗಿದ್ದು, ಇದು ಸಂವಿಧಾನದ 19 (1) (ಜಿ) ವಿಧಿ ಅನ್ವಯ ಮೂಲಭೂತ ಹಕ್ಕು ಕೂಡಾ ಆಗಿದೆ. ಆದರೆ ಇದೇ ವೇಳೆ ನಿರ್ದಿಷ್ಟ ವೃತ್ತಿಯನ್ನು ಪವಿತ್ರ ಎಂದು ಬಿಂಬಿಸಿ, ಸಂಕೋಲೆಗಳಿಂದ ಬಿಗಿಯಲಾಗಿದೆ. ಆದುದರಿಂದ ಇದನ್ನು ವ್ಯಾಪಾರವಾಗಿ ಮಾಡುವುದು ಹಾಗೂ ಇದರಿಂದ ಲಾಭ ಪಡೆಯಲು ಅವಕಾಶವಿಲ್ಲ. ಆದುದರಿಂದ ಯಾವುದೇ ಕ್ಯಾಪಿಟೇಶನ್ ಶುಲ್ಕ ವಿಧಿಸುವಂತಿಲ್ಲ. ಇಲ್ಲಿ ಪ್ರವೇಶಕ್ಕೆ ಪ್ರತಿಭೆ ಮಾನದಂಡವಾಗಿರಬೇಕೇ ವಿನಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳ ಬೇಕು ಬೇಡಗಳು ಮಾನದಂಡವಾಗಬಾರದು ಎಂದು ಕೋರ್ಟ್ ಹೇಳಿದೆ.





