ಅಧಿಕಾರಿಗಳ ಸಮನ್ವಯತೆಯಿಂದ ಪ್ಲಾಸ್ಟಿಕ್ ಮುಕ್ತ ನಗರವಾಗಲಿ: ಜಾರ್ಜ್
ಬೆಂಗಳೂರು, ಮೇ 3: ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ, ವಿವಿಧ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರಬೇಕೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಮಂಗಳವಾರ ನಗರದ ಮಲ್ಲೇಶ್ವರಂನ ಐಪಿಪಿ ಕೇಂದ್ರದಲ್ಲಿ ಬಿಬಿಎಂಪಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಪ್ಲಾಸ್ಟಿಕ್ ನಿಷೇಧ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರಕಾರ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಯಾವ ಪ್ಲಾಸ್ಟಿಕ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅರಿವು ಇರುವುದು ಅಗತ್ಯ ಎಂದು ಹೇಳಿದರು.
ವಿವಿಧ ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಎಲ್ಲ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ದಂಡ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ, ಉಪಯೋಗಿಸುವ ಪ್ಲಾಸ್ಟಿಕ್ ಯಾವುದು ಹಾಗೂ ಬಳಕೆ ಮಾಡದಿರುವ ಪ್ಲಾಸ್ಟಿಕ್ ಯಾವುದು ಎಂಬುದರ ಬಗ್ಗೆ ಇಲಾಖಾ ಅಧಿಕಾರಿಗಳಲ್ಲಿ ಅರಿವು ಇರಬೇಕು ಎಂದು ಸಲಹೆ ನೀಡಿದರು.
ಪೂರ್ವಜರ ಕಾಲದಲ್ಲಿ ಪ್ಲಾಸ್ಟಿಕ್ ಉತ್ಪನ್ನ ಯಾವುದೂ ಇರಲಿಲ್ಲ. ಹೀಗಾಗಿ, ಹೊಲ ಗದ್ದೆಗಳಲ್ಲಿ ಆರೋಗ್ಯಕರ ಗೊಬ್ಬರ ಲಭ್ಯವಾಗುತ್ತಿತ್ತು. ಆದರೆ, ಪ್ಲಾಸ್ಟಿಕ್ ಬಳಕೆಯಿಂದಾಗಿ ಇಂದು ಪರಿಸರ ಮಲಿನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡುವ ವಸ್ತುಗಳು ಯಾವುದು ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇರಬೇಕು. ಆಗ ಮಾತ್ರ ಇಂತಹ ಉತ್ಪನ್ನಗಳ ಮೇಲೆ ದಂಡ ವಿಧಿಸಲು ಸುಲಭವಾಗುತ್ತದೆ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಅರಿವಿನ ಕೊರತೆಯಿಂದಾಗಿ ಪ್ಲಾಸ್ಟಿಕ್ ಬಳಕೆ ಇನ್ನೂ ಸಂಪೂರ್ಣವಾಗಿ ನಿಷೇಧವಾಗಿಲ್ಲ. ಈ ನಿಷೇಧದ ಸೂಚನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಅರಿವಿನ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುವ ಆವಶ್ಯಕತೆ ಇದೆ ಎಂದು ಹೇಳಿದರು.