ಪೆಟ್ರೋಲ್ ಬೆಲೆ ಇಳಿಕೆಗೆ ಆಗ್ರಹಿಸಿ ಅಗ್ಗದ ದರದಲ್ಲಿ ಪೆಟ್ರೋಲ್ ಮಾರಾಟ
ಎನ್‌ಎಸ್‌ಯುಐನಿಂದ ವಿನೂತನ ಧರಣಿ
ಬೆಂಗಳೂರು, ಮೇ 3: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಇಳಿಕೆಯಾಗಿದ್ದರೂ ಕೇಂದ್ರ ಸರಕಾರ, ದುಬಾರಿ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಸಾರ್ವಜನಿಕರಿಗೆ ಅಗ್ಗದ ಬೆಲೆ ಪೆಟ್ರೋಲ್ ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಮಂಗಳವಾರ ಇಲ್ಲಿನ ವೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ನೇತೃತ್ವದಲ್ಲಿ ಸೇರಿದ ನೂರಾರು ಕಾರ್ಯಕರ್ತರು, ಸಾರ್ವಜನಿಕರಿಗೆ ಕೇವಲ 30 ರೂ.ಬೆಲೆಗೆ ಲೀಟರ್ ಪೆಟ್ರೋಲ್ ಮಾರಾಟ ಮಾಡುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್‌ಗೆ ಕೇವಲ 46 ಡಾಲರ್‌ಗಳಿವೆ. ಆದರೆ, ಕೇಂದ್ರ ಸರಕಾರ ನಾಲ್ಕು ಪಟ್ಟು ದುಬಾರಿ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡುವ ಮೂಲಕ ಜನ ಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಧಿಕಾರಕ್ಕೆ ಬರುವ ಮುನ್ನ ತೈಲೋತ್ಪನ್ನಗಳ ಬೆಲೆ ಇಳಿಕೆ ಮಾಡುವೆ, ಜನ ಸಾಮಾನ್ಯರಿಗೆ ‘ಅಚ್ಛೇದಿನ್’ ದಯಪಾಲಿಸುವೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ, ಮೋದಿಯವರು ಇದೀಗ ಅದನ್ನೆಲ್ಲ ಮರೆತಿದ್ದಾರೆಂದು ಟೀಕಿಸಿದರು.
ಪ್ರಧಾನಿ ಮೋದಿಯವರಿಗೆ ಕನಿಷ್ಠ ನೈತಿಕತೆ ಇದ್ದರೆ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ಅಚ್ಛೇದಿನ್ ತಂದು ಕೊಡಬೇಕು. ಇಲ್ಲವಾದರೆ ಎನ್‌ಎಸ್‌ಯುಐ ದೇಶಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ಮುಖಂಡರಾದ ಚಾಣಕ್ಯ, ಪ್ರಭು, ಕೀರ್ತಿ, ಶ್ರೀಧರ್ ಮತ್ತು ಜಯೇಂದ್ರ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.