ಗುಜರಾತ್ ಮಾದರಿ ! ದೇಶದ ಮೂರನೇ ಒಂದಕ್ಕಿಂತ ಹೆಚ್ಚು ಮುಸ್ಲಿಂ ಕೈದಿಗಳು ಗುಜರಾತ್ ನಲ್ಲಿದ್ದಾರೆ

ಅಹಮದಾಬಾದ್, ಮೇ 4: ಲಾಕಪ್ ನಲ್ಲಿ ಹಾಕಲ್ಪಟ್ಟ ದೇಶದ ಮೂರನೇ ಒಂದಕ್ಕಿಂತ ಹೆಚ್ಚು ಮುಸ್ಲಿಂ ಕೈದಿಗಳು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್ ನಲ್ಲಿದ್ದಾರೆಂದು ಕೇಂದ್ರ ಗೃಹ ಸಚಿವಾಲಯದ ಅಂಕಿಸಂಖ್ಯೆಗಳು ಹೇಳುತ್ತವೆ.
ದೇಶದಾದ್ಯಂತ ಒಟ್ಟು 658 ಮುಸ್ಲಿಮರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರೆ, ಅವರಲ್ಲಿ 240 ಮಂದಿ ಗುಜರಾತಿನವರಾದರೆ 220 ಮಂದಿ ತಮಿಳು ನಾಡಿನವರಾಗಿದ್ದಾರೆ.
ಭಾರತದಲ್ಲಿ ಒಟ್ಟು 82,190 ಮುಸ್ಲಿಮರು ಜೈಲುಗಳಲ್ಲಿ ಹಾಗೂ ಪೊಲೀಸ್ ಕಸ್ಟಡಿಯಲ್ಲಿದ್ದು ಅವರಲ್ಲಿ 21,550 ಮಂದಿಯ ಅಪರಾಧ ಸಾಬೀತಾಗಿದ್ದರೆ 59,550 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ ಹಾಗೂ 658 ಮಂದಿ ಲಾಕಪ್ ನಲ್ಲಿದ್ದಾರೆ.
ಗುಜರಾತಿನಲ್ಲಿ 58.6 ಲಕ್ಷ ಮುಸ್ಲಿಮರಿದ್ದು ರಾಜ್ಯದ ಒಟ್ಟು ಜನಸಂಖ್ಯೆಯ 9.7%ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ. ದೇಶದ ಒಟ್ಟು 17.2 ಕೋಟಿ ಮುಸ್ಲಿಂ ಜನಸಂಖ್ಯೆಯ 3.4%ರಷ್ಟು ಮುಸ್ಲಿಮರು ಗುಜರಾತಿನಲ್ಲಿದ್ದಾರೆ.
ಗುಜರಾತಿನಲ್ಲಿ ಹಲವಾರಯ ಪ್ರಕರಣಗಳಲ್ಲಿ 846 ಮಂದಿಯ ಅಪರಾಧ ಸಾಬೀತಾಗಿದ್ದರೆ, ಅವರಲ್ಲಿ 3.95% ಮಂದಿ ಮುಸ್ಲಿಮರಾಗಿದ್ದಾರೆ.
ಇನ್ನೊಂದು ಆಶ್ಚರ್ಯಕರ ಮಾಹಿತಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಲಾಕಪ್ಪಿನಲ್ಲಿರವ ಮುಸ್ಲಿಮರ ಸಂಖ್ಯೆ ಕೇವಲ 35 ಆಗಿದೆ. ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯ 5% ಮಂದಿ ಕಾಶ್ಮೀರದಲ್ಲಿದ್ದಾರೆ.
ಸಮಾಜ ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯಿದೆ 1985 ಹಾಗೂ ಉಗ್ರವಾದ ನಿಯಂತ್ರಣ ಕಾಯಿದೆ (ಪೋಟಾ)ಯನ್ನು ಸಾಮಾನ್ಯವಾಗಿ ಹೆಚ್ಚಾಗಿ ಅಲ್ಪಸಂಖ್ಯಾತರ ವಿರುದ್ಧ ಉಪಯೋಗಿಸಲಾಗುತ್ತಿದೆಯೆಂಬುದು ಸಾಮಾಜಿಕ ಕಾರ್ಯಕರ್ತರ ಆರೋಪವಾಗಿದೆ.







