ಮೇ 8ರಂದು ಪ್ರಧಾನಿ ಮಂಗಳೂರಿಗೆ
ಮಂಗಳೂರು,ಮೇ.4: ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 8ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಮೇ 8ರಂದು ಹೊಸದಿಲ್ಲಿಯಿಂದ ಕೇರಳಕ್ಕೆ ಪ್ರಧಾನಿ ತೆರಳಲಿದ್ದು, ಬೆಳಗ್ಗೆ 9:45ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸಿ, 9:50ಕ್ಕೆ ಹೆಲಿಕಾಪ್ಟರ್ ಮೂಲಕ ಕಾಸರಗೋಡಿಗೆ ತೆರಳಲಿದ್ದಾರೆ. ಮಧ್ಯಾಹ್ನ 11:55ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಹಿಂದಿರುಗುವ ಪ್ರಧಾನಿ, 12 ಗಂಟೆಗೆ ಕೊಚ್ಚಿಗೆ ತೆರಳಲಿದ್ದಾರೆ.
ಪೂರ್ವಭಾವಿ ಸಭೆ: ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಯಿತು. ಪ್ರಧಾನಿ ಹಾಗೂ ಅವರ ಭದ್ರತಾ ತಂಡದ ಆಗಮನದ ಪ್ರಯುಕ್ತ ವಿಮಾನ ನಿಲ್ದಾಣ ಮತ್ತು ನಗರದಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆ, ವೈದ್ಯಕೀಯ, ವಸತಿ ಮತ್ತು ತುರ್ತುಸೇವಾ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಶ್ಚಿಮ ವಲಯ ಐಜಿಪಿ ಅಮೃತಪಾಲ್, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.





