ಅನಾರೋಗ್ಯ ಪೀಡಿತ ಮೊಮ್ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಅಜ್ಜಿ!

ಪುಣೆ,ಮೇ 4: ತನ್ನ ಮೂರು ತಿಂಗಳು ಪ್ರಾಯದ ಮೊಮ್ಮಗಳ ಅನಾರೋಗ್ಯ ಮತ್ತು ಚಿಕಿತ್ಸೆಗಾಗಿ ಖರ್ಚಿನಿಂದಾಗಿ ಬೇಸತ್ತಿದ್ದ ಮಹಿಳೆಯೋರ್ವಳು ಮಗುವನ್ನು ನೀರು ತುಂಬಿದ್ದ ಬ್ಯಾರಲ್‌ನಲ್ಲಿ ಮುಳುಗಿಸಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಇಲ್ಲಿಯ ಉಂದ್ರಿ ಪ್ರದೇಶದಲ್ಲಿ ನಡೆದಿದೆ.
ಘಟನೆಯ ಸಂದರ್ಭ ಮಗುವಿನ ತಾಯಿ ಸ್ನಾನಕ್ಕೆ ತೆರಳಿದ್ದರೆ ತಂದೆ ಇನ್ನೊಂದು ಬಚ್ಚಲಿಗೆ ಹೋಗಿದ್ದ. ಕೋಣೆಯಲ್ಲಿ ತೊಟ್ಟಿಲಿನಲ್ಲಿ ಮಗು ಮಾತ್ರವಿದ್ದು,ಅಜ್ಜಿ ಸುಶೀಲಾ ಸಂಜಯ ತಾರು(50) ಅಡುಗೆ ಕೋಣೆಯಲ್ಲಿದ್ದಳು. ಆಕೆಯ ಸೊಸೆ ಸ್ನಾನ ಮುಗಿಸಿಕೊಂಡು ಕೋಣೆಗೆ ಮರಳಿದಾಗ ತೊಟ್ಟಿಲಿನಲ್ಲಿ ಮಗುವಿರಲಿಲ್ಲ. ಆಕೆಯ ಗಂಡನೂ ಧಾವಿಸಿ ಬಂದಿದ್ದು, ಇಬ್ಬರೂ ಸೇರಿ ಮಗುವಿಗಾಗಿ ಮನೆಯಲ್ಲಿ ಹುಡುಕಾಟ ಆರಂಭಿಸಿದ್ದರು. ಅವರ ದಾರಿ ತಪ್ಪಿಸಲು ಸುಶೀಲಾ,ಮನೆಬಾಗಿಲಿನಲ್ಲಿ ಇಬ್ಬರು ಮಹಿಳೆಯರನ್ನು ತಾನು ಕಂಡಿದ್ದು ಬಹುಶಃ ಅವರೇ ಮಗುವನ್ನು ಅಪಹರಿಸಿರಬಹುದು ಎಂದು ಕತೆ ಕಟ್ಟಿದ್ದಳು. ಆದರೆ ಮನೆಯ ಕೋಣೆಯೊಂದರಲ್ಲಿ ನೀರು ತುಂಬಿದ್ದ ಬ್ಯಾರಲ್‌ನಲ್ಲಿ ಮಗುವಿನ ಶವ ಪತ್ತೆಯಾದಾಗ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು.
ಸುಶೀಲಾಳ ಬಗ್ಗೆ ಅನುಮಾನಗೊಂಡ ಪೊಲಿಸರು ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮಗುವನ್ನು ತಾನೇ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮಗು ಜನ್ಮದಿಂದಲೇ ಅನಾರೋಗ್ಯ ಪೀಡಿತವಾಗಿದ್ದು ಅದರ ಚಿಕಿತ್ಸೆಗೆ ಭಾರೀ ಹಣ ಖರ್ಚಾಗುತ್ತಿತ್ತು. ಹೀಗಾಗಿ ತಾನು ಅದನ್ನು ಕೊಂದೆ ಎಂದಾಕೆ ಹೇಳಿದ್ದಾಳೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.





