ಬಿನ್ ಲಾದನ್ ಕುಟುಂಬದ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತಲ್ಲಣ

ಜಿದ್ದಾ, ಮೇ 4: ಅಲ್-ಖಾಯ್ದಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಉಸಾಮ ಬಿನ್ ಲಾದನ್‌ನ ಕುಟುಂಬದ ಬಹುರಾಷ್ಟ್ರೀಯ ಕಟ್ಟಡ ನಿರ್ಮಾಣ ಉದ್ಯಮವನ್ನು ತೈಲ ದರ ಕುಸಿತ ಅಲುಗಾಡಿಸಿದೆ. ಉಸಾಮನ ತಂದೆ ಸ್ಥಾಪಿಸಿದ ಉದ್ಯಮವನ್ನು ಈಗ ಆತನ ಸಹೋದರ ನಡೆಸುತ್ತಿದ್ದಾರೆ.
ಸಾವಿರಾರು ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಪಾವತಿಸಲು ಸೌದಿ ಬಿನ್‌ಲಾದಿನ್ ಗ್ರೂಪ್ (ಎಸ್‌ಬಿಜಿ) ವಿಫಲವಾಗಿರುವ ಹಿನ್ನೆಲೆಯಲ್ಲಿ, ಅದು ತನ್ನ ಕಾರ್ಮಿಕರಿಂದ ಬೀದಿ ಪ್ರತಿಭಟನೆಗಳನ್ನು ಎದುರಿಸುತ್ತಿದೆ.
ಪವಿತ್ರ ನಗರ ಮಕ್ಕಾದಲ್ಲಿ ಶನಿವಾರ ಸೌದಿಯೇತರ ಕಾರ್ಮಿಕರು ಏಳು ಬಸ್‌ಗಳನ್ನು ಸುಟ್ಟು ಹಾಕಿದರು. ತನ್ನ 77,000 ವಿದೇಶಿ ನೌಕರರನ್ನು ವಜಾಗೊಳಿಸುತ್ತಿದ್ದೇನೆಂದು ಎಸ್‌ಪಿಜಿ ಘೋಷಿಸಿದ್ದು, ಇದು ಅದರ ಒಟ್ಟು ಸಿಬ್ಬಂದಿ ಸಂಖ್ಯೆಯ ಅರ್ಧದಷ್ಟಾಗಿದೆ.
ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ದೊಡ್ಡ ಸಂಖ್ಯೆಯ ವಿದೇಶಿ ನೌಕರರು ಮತ್ತು 12,000 ಸೌದಿ ರಾಷ್ಟ್ರೀಯರಿಗೆ 66 ಕೋಟಿ ಡಾಲರ್ (4,384 ಕೋಟಿ ರೂಪಾಯಿ) ಬಾಕಿ ವೇತನವನ್ನು ಕೊಡಬೇಕಾದ ಒತ್ತಡದಲ್ಲಿ ಕಂಪೆನಿ ಸಿಲುಕಿಕೊಂಡಿದೆ. ಕಂಪೆನಿಯು ತನ್ನ ಸೌದಿ ನೌಕರರಿಗೆ ‘‘ಒಂದೋ ರಾಜೀನಾಮೆ ಕೊಡಿ, ಇಲ್ಲವೇ ಕಾದು ನೋಡಿ’’ ಎಂದು ತಿಳಿಸಿದೆ. ತಾಳ್ಮೆಯಿಂದ ಕಾಯುವ ಎಲ್ಲ ನೌಕರರಿಗೆ ಎರಡು ತಿಂಗಳ ಬೋನಸ್ ನೀಡುವುದಾಗಿ ಕಂಪೆನಿ ಭರವಸೆ ನೀಡಿದೆ.
ಎಸ್‌ಬಿಜಿಯ ಇಂದಿನ ಈ ದಯನೀಯ ಸ್ಥಿತಿ ಪಾತಾಳಕ್ಕಿಳಿದಿರುವ ತೈಲ ಬೆಲೆಯ ಪರಿಣಾಮವಾಗಿದೆ. ಸರಕಾರದ 70 ಶೇಕಡ ನಿರ್ಮಾಣ ಕಾಮಗಾರಿಗಳನ್ನು ಕಂಪೆನಿಯು ವಹಿಸಿಕೊಳ್ಳುತ್ತದೆ. ಆದರೆ, ತೈಲ ಬೆಲೆಯಲ್ಲಿನ ಕುಸಿತದ ಹಿನ್ನೆಲೆಯಲ್ಲಿ ಸರಕಾರವೇ ಈಗ 10,000 ಕೋಟಿ ಡಾಲರ್ (ಸುಮಾರು 6.65 ಲಕ್ಷ ಕೋಟಿ ರೂಪಾಯಿ) ಸಾಲದಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ. ಸರಕಾರ ಇತ್ತೀಚಿನ ವರ್ಷಗಳಲ್ಲಿ ತನ್ನ ಆದಾಯದ 90 ಶೇಕಡದಷ್ಟನ್ನು ತೈಲ ಮಾರಾಟದಿಂದಲೇ ಪಡೆಯುತ್ತಿತ್ತು. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದನ್ನು ಸರಕಾರ ನಿಲ್ಲಿಸಿದೆ ಎಂದು ಮೂಲಗಳು ಹೇಳಿವೆ. ಇದು ಸೌದಿ ಬಿನ್‌ಲಾದಿನ್ ಗುಂಪಿನ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ.







