ಬತ್ತಿಹೋಗಿದೆ ಕೂಟೇಲು ಬಾವಿ: ಉಪ್ಪಿನಂಗಡಿಗೂ ತಟ್ಟಿದೆ ಬರದ ಬಿಸಿ
ಕೃಷಿ ಪಂಪ್ ತೆರವಿಗೆ ಪಂಚಾಯತ್ ಆದೇಶ

ಉಪ್ಪಿನಂಗಡಿ, ಮೇ 4: ಇಲ್ಲಿನ ಪಟ್ಟಣ ಪ್ರದೇಶಕ್ಕೆ ಹಾಗೂ ಲಕ್ಷ್ಮೀನಗರ, ಹರಿನಗರ ಸೇರಿದಂತೆ ರಾಮನಗರದ ಕೆಲ ಪ್ರದೇಶಗಳಿಗೆ ಕುಡಿಯುವ ನೀರೊದಗಿಸುವ ನೇತ್ರಾವತಿ ನದಿ ದಡದಲ್ಲಿರುವ ಕೂಟೇಲು ಬಾವಿ ಬತ್ತಿ ಹೋಗಿದ್ದು, ಇನ್ನು 48 ಗಂಟೆಗಳಿಗಾಗುವಷ್ಟು ಮಾತ್ರ ನೀರಿದೆ. ನದಿಯಲ್ಲಿಯೂ ನೀರು ಬತ್ತಿದ್ದರಿಂದ ಒರತೆಯೂ ನಿಂತು ಹೋಗಿದ್ದು, ಈ ಹಿನ್ನೆಲೆಯಲ್ಲಿ ಪಂಚಾಯತ್ ಆಡಳಿತ ಹಾಗೂ ಕಂದಾಯ ಅಧಿಕಾರಿಗಳು ಬುಧವಾರ ನದಿ ತೀರಕ್ಕೆ ಭೇಟಿ ನೀಡಿ ಕೃಷಿ ಪಂಪ್‌ಗಳ ತೆರವಿಗೆ ಆದೇಶಿಸಿದ್ದಾರೆ. ಅಲ್ಲದೇ ಅನಧಿಕೃತವಾಗಿ ಅಳವಡಿಸಿರುವ 4 ಪಂಪ್‌ಗಳನ್ನು ಇದೇ ಸಂದರ್ಭ ತೆರವುಗೊಳಿಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಕೆಲವು ಕಡೆ ಪಂಚಾಯತ್ ಕುಡಿಯುವ ನೀರಿಗಾಗಿ ಕೊಳವೆ ಬಾವಿಯನ್ನು ಆಶ್ರಯಿಸಿದ್ದರೆ, ಇನ್ನು ಕೆಲವು ಕಡೆ ನದಿ, ನದಿಯ ತೀರದಲ್ಲಿ ಬಾವಿ ತೋಡಿ ಅದರಲ್ಲಿ ಬರುವ ನದಿಯ ನೀರ ಸೆಲೆಗಳನ್ನು ಆಶ್ರಯಿಸಿದೆ. ಕೂಟೇಲುವಿನ ಬಳಿ ಇಂತಹದ್ದೊಂದು ಬಾವಿಯಿದ್ದು, ಪಟ್ಟಣ ಪ್ರದೇಶಕ್ಕೆ ಇಲ್ಲಿಂದಲೇ ನೀರು ಸರಬರಾಜಾಗುತ್ತದೆ. ಆದರೆ, ನೇತ್ರಾವತಿ- ಕುಮಾರಧಾರ ನದಿಗಳು ಬತ್ತಿಹೋಗಿ, ತೀವ್ರ ಜಲಕ್ಷಾಮ ಉಂಟಾಗಿರುವುದರಿಂದ ಕೂಟೇಲು ಬಳಿ ಇರುವ ಬಾವಿಯಲ್ಲಿ ಇನ್ನು 48 ಗಂಟೆಗಳಿಗಾಗುವಷ್ಟು ಮಾತ್ರ ನೀರಿದೆ. ಮಳೆ ಬಾರದೆ ನೀರಿನ ಅಭಾವ ಹೀಗೆಯೇ ಮುಂದುವರಿದರೆ 2 ದಿನಗಳಿಗೊಮ್ಮೆ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಬಿಡಲು ಪಂಚಾಯತ್ ಆಡಳಿತ ಚಿಂತಿಸಿದೆ.
ಕೃಷಿ ಪಂಪ್‌ಗಳ ಪರಿಶೀಲನೆ:
ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ಅಲ್ಲಲ್ಲಿ ಕೃಷಿಕರು ಪಂಪ್‌ಗಳನ್ನು ಅಳವಡಿಸಿದ್ದು, ಕೆಲವರು ನದಿಯಿಂದ ಕೃಷಿಗೆ ನೀರು ತೆಗೆಯಲು ಈ ಹಿಂದೆಯೇ ಪರವಾನಿಗೆ ಪಡೆದಿದ್ದರೆ, ಇನ್ನು ಕೆಲವರು ಅನಧಿಕೃತವಾಗಿ ಪಂಪ್‌ಗಳನ್ನು ಜೋಡಿಸಿದ್ದಾರೆ. ಇದೀಗ ನದಿಗಳಲ್ಲಿ ಅಲ್ಪಸ್ವಲ್ಪ ನೀರಿದ್ದರೂ, ಕಟ್ಟಗಳನ್ನು ಕಟ್ಟಿ ಅಥವಾ ಆ ನೀರನ್ನು ಕಣಿವೆಗಳನ್ನು ರಚಿಸಿ ತಮ್ಮ ಪಂಪ್‌ಗಳು ಇರುವಲ್ಲಿಗೆ ತರುವಲ್ಲಿ ರೈತರು ಯಶಸ್ವಿಯೂ ಆಗಿದ್ದಾರೆ. ಇದರಿಂದ ನದಿಯ ನೀರಿನ ಹರಿಯುವಿಕೆಗೆ ತೊಡಕುಂಟಾಗಿದ್ದು, ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷರು, ಪಂಚಾಯತ್ ಹಾಗೂ ಕಂದಾಯಧಿಕಾರಿಗಳ ತಂಡ ಬುಧವಾರ ಉಪ್ಪಿನಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ನದಿಗಳಿಗೆ ಜೋಡಿಸಿರುವ ಪಂಪ್‌ಗಳ ಪರಿಶೀಲನೆ ನಡೆಸಿತು. ಈ ಸಂದರ್ಭ ಅನಧಿಕೃತವಾಗಿದ್ದ ನಾಲ್ಕು ಪಂಪ್‌ಗಳನ್ನು ಅಲ್ಲಿಯೇ ತೆರವುಗೊಳಿಸಿತು. ಹಾಗೂ ಅಧಿಕೃತವಾಗಿ ಪಂಪ್‌ಗಳನ್ನು ಅಳವಡಿಸಿದವರಿಗೆ ನಾಳೆಯೊಳಗೆ ಪಂಪ್‌ಗಳನ್ನು ತೆರವುಗೊಳಿಸಬೇಕೆಂದು ವೌಖಿಕ ಆದೇಶ ನೀಡಿತು.
ನೀರನ್ನು ಕುದಿಸಿ ಕುಡಿಯಲು ಮನವಿ
ನದಿಯಲ್ಲಿ ನೀರಿಲ್ಲದೆ, ಇರುವ ಅಲ್ಪಸ್ವಲ್ಪನೀರು ಇದೀಗ ಮಲಿನಗೊಂಡಿದೆ. ಆದ್ದರಿಂದ ಈ ನೀರನ್ನು ಹಾಗೆಯೇ ಕುಡಿದರೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದು, ಜನರು ನೀರನ್ನು ಕುದಿಸಿ ಕುಡಿಯಬೇಕೆಂದು ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಾಫ್ ಮನವಿ ಮಾಡಿದ್ದಾರೆ. ನದಿಯಲ್ಲಿ ವಾಹನಗಳನ್ನು ತೊಳೆಯಬಾರದೆಂದು ಕಟ್ಟುನಿಟ್ಟಿನ ಆದೇಶವಿದ್ದರೂ, ಅಧಿಕಾರಿಗಳು ನದಿ ಪರಿಶೀಲನೆ ಮಾಡುತ್ತಿದ್ದ ಸಂದರ್ಭ ರಿಕ್ಷಾವೊಂದನ್ನು ನದಿ ನೀರಿನಲ್ಲಿ ತೊಳೆಯುವುದು ಕಂಡು ಬಂದಿತ್ತು. ಇದನ್ನು ಮುಟ್ಟುಗೋಲು ಹಾಕಲು ಅಧಿಕಾರಿಗಳು ಮುಂದಾದರಾದರೂ, ಬಳಿಕ ಮಾನವೀಯ ನೆಲೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟರು.
ಪಂಪ್‌ಗಳ ಪರಿಶೀಲನೆ ಸಂದರ್ ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಾಫ್, ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಪಂಚಾಯತ್ ಸಿಬ್ಬಂದಿ ಮಹಾಲಿಂಗ, ಇಸಾಕ್, ಉಮೇಶ ಮತ್ತಿತರರು ಜೊತೆಗಿದ್ದರು.
ಎರಡು ದಿನಕ್ಕೊಮ್ಮೆ ನೀರು: ಅಬ್ದುರ್ರಹ್ಮಾನ್ ಕೆ.
ಉಪ್ಪಿನಂಗಡಿಗೆ ಕುಡಿಯುವ ನೀರೊದಗಿಸಲು ಪ್ರಮುಖ ಬಾವಿಯಾಗಿದ್ದ ಕೂಟೇಲು ಬಾವಿಯಲ್ಲಿ ಇನ್ನು 48 ಗಂಟೆಗಳಿಗಾಗುವಷ್ಟು ಮಾತ್ರ ನೀರಿದೆ. ನದಿಗಳು ಬತ್ತಿ ಹೋಗಿದ್ದರಿಂದ ಬಾವಿಯಲ್ಲಿ ಒರತೆ ಕೂಡಾ ಇಲ್ಲ. ಮಳೆ ಬಾರದೆ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ಎದುರಾಗಲಿದೆ. ಈ ಬಗ್ಗೆ ಚಿಂತನೆ ನಡೆದಿದ್ದು, ಇನ್ನು ಅಧಿಕೃತ ಆದೇಶ ಹೊರಡಿಸಿಲ್ಲ. ಬಾವಿಯಲ್ಲಿ ನೀರು ಹೆಚ್ಚಾದರೆ ಈ ಪರಿಸ್ಥಿತಿ ಉದ್ಭವವಾಗುವುದಿಲ್ಲ. ನದಿಗೆ ಅಳವಡಿಸಿರುವ ಪಂಪ್‌ಗಳಿಂದಲೂ ನದಿಯ ನೀರು ಬತ್ತಿ ಹೋಗಿದ್ದು, ಅದನ್ನು ಒಂದು ದಿನದಲ್ಲಿ ತೆರವುಗೊಳಿಸಲು ಈಗಾಗಲೇ ವೌಖಿಕ ಆದೇಶ ನೀಡಿದ್ದೇವೆ ಎಂದು ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಪತ್ರಿಕೆಗೆ ತಿಳಿಸಿದ್ದಾರೆ.







