ಶಿವಮೊಗ್ಗ ಜಿಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ
ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಿಂದ ಗುಪ್ತ ಕಾರ್ಯತಂತ್ರ
<ಬಿ. ರೇಣುಕೇಶ್
ಶಿವಮೊಗ್ಗ, ಮೇ 4: ಯಾರಿಗೂ ಸ್ಪಷ್ಟ ಬಹುಮತವಿಲ್ಲದೆ ಅತಂತ್ರ ಸ್ಥಿತಿ ಮನೆ ಮಾಡಿರುವ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆಯಲಿರುವ ಚುನಾವಣೆಯು ಕುತೂಹಲ ಕೆರಳಿಸಿದೆ. ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳು ಅಧಿಕಾರದ ಗದ್ದುಗೆಯೇರಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಯಾರಿಗೆ ‘‘ಅಧಿಕಾರ ಭಾಗ್ಯ’’ ದೊರಕಲಿದೆ ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ. ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಿರುವ ಬಿಜೆಪಿ ಪಕ್ಷವು, ಅಧಿಕಾರದ ಗದ್ದುಗೆಯೇರಲು ತೀವ್ರ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೂಡ ಅಧಿಕಾರದ ಗದ್ದಗೆಯೇರಲು ಇನ್ನಿಲ್ಲದ ಸನ್ನಾಹ ನಡೆಸುತ್ತಿವೆ. ಜಿ.ಪಂ. ‘‘ಅಧಿಕಾರ ಭಾಗ್ಯ’’ಕ್ಕಾಗಿ ಈ ಮೂರು ರಾಜಕೀಯ ಪಕ್ಷಗಳು ತನ್ನದೆ ಆದ ಗುಪ್ತ ಕಾರ್ಯತಂತ್ರ ರೂಪಿಸುತ್ತಿವೆ. ಮೈತ್ರಿ ಪ್ಲ್ಯಾನ್: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿದ ವೇದಾ ವಿಜಯಕುಮಾರ್‌ರವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್ ಪಕ್ಷ ತೀವ್ರ ಕಸರತ್ತು ನಡೆಸುತ್ತಿವೆ. ಸ್ವತಃ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ರವರೇ ಅಖಾಡಕ್ಕಿಳಿದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತಕ್ಕೆ ಸಾಕಷ್ಟು ಹರಸಾಹಸ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಜೊತೆ ಮೈತ್ರಿ ರಾಜಕಾರಣಕ್ಕೆ ಜೆಡಿಎಸ್ ಪಕ್ಷದ ಕೆಲ ಮುಖಂಡರು ಅಪಸ್ವರ ಎತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆ ಪಕ್ಷದ ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿಗೌಡರವರು ಬಿಜೆಪಿ ಜೊತೆ ಮೈತ್ರಿಗೆ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮತ್ತೊಂದೆಡೆ ಸೊರಬದ ಶಾಸಕ ಮಧು ಬಂಗಾರಪ್ಪರವರು ಕಾಂಗ್ರೆಸ್ ಜೊತೆ ಮೈತ್ರಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂಬ ಬಗ್ಗೆ ಮುಖಂಡರಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗದಿರುವುದು ಆ ಪಕ್ಷದ ಸದಸ್ಯರಲ್ಲಿ ಗೊಂದಲ ಉಂಟು ಮಾಡಿದೆ. ಸೆಳೆಯಲು ಯತ್ನ?: ಮತ್ತೊಂದೆಡೆ ಸರಳ ಬಹುಮತಕ್ಕೆ ಕೇವಲ ಓರ್ವ ಸದಸ್ಯರ ಕೊರತೆಯಿರುವ ಬಿಜೆಪಿ ಕೂಡ ಅಧಿಕಾರದ ಗದ್ದುಗೆಯೇರಲು ಸನ್ನಾಹ ನಡೆಸುತ್ತಿದೆ. ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್‌ರವರ ಬೆಂಬಲ ಪಡೆಯದಿರಲು ನಿರ್ಧರಿಸಿರುವ ಆ ಪಕ್ಷದ ಮುಖಂಡರು, ಜೆಡಿಎಸ್ ಪಕ್ಷದ ಒಂದಿಬ್ಬರು ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೆಲ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳುವ ಕೆಲಸವನ್ನು ಬಿಜೆಪಿಯ ನಾಯಕರು ನಡೆಸಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ. ತನಗೆ ಬೆಂಬಲ ವ್ಯಕ್ತಪಡಿಸಿದರೆ ಅಧ್ಯಕ್ಷ ಸ್ಥಾನ ನೀಡುವ ಆಫರ್‌ನ್ನು ಬಿಜೆಪಿಯು ಜೆಡಿಎಸ್ ಪಕ್ಷದ ಮುಖಂಡರ ಮುಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಕೆಲ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುವ ಇರಾದೆ ವ್ಯಕ್ತಪಡಿಸುತ್ತಿದ್ದಾರೆಂಬ ಮಾಹಿತಿಗಳೂ ಕೇಳಿಬರುತ್ತಿದೆ. ಮೀಸಲು - ಬಲಾಬಲ: ಮುಂದಿನ ಐದು ವರ್ಷಗಳ ಅವಧಿಗೆ ಶಿವಮೊಗ್ಗ ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಕರಡು ಪಟ್ಟಿಯನ್ನು ಏ. 5 ರಂದು ರಾಜ್ಯ ಸರ್ಕಾರ ಪ್ರಕಟಿಸಿತ್ತು. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ ಬಿ ಮಹಿಳೆಗೆ ಮೀಸಲಿರಿಸಿತ್ತು. ಏ. 15 ರವರೆಗೆ ಆಕ್ಷೇಪಣೆಗೆ ಕಾಲಾವಾಕಾಶ ನೀಡಿತ್ತು. ಏ. 15 ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದ್ದ ಸರ್ಕಾರ, ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಪ್ರಸ್ತುತ 31 ಸದಸ್ಯರ ಬಲವಿರುವ ಜಿ.ಪಂ.ನಲ್ಲಿ, ಬಹುಮತಕ್ಕೆ 16 ಸದಸ್ಯರ ಬೆಂಬಲ ಅತ್ಯವಶ್ಯಕವಾಗಿದೆ. 15 ಸದಸ್ಯರನ್ನು ಹೊಂದಿರುವ ಬಿಜೆಪಿ ಅತೀ ದೊಡ್ಡ ಪಕ್ಷವಾಗಿದ್ದು, ಸರಳ ಬಹುಮತಕ್ಕೆ ಕೇವಲ ಓರ್ವ ಸದಸ್ಯರ ಕೊರತೆ ಆ ಪಕ್ಷಕ್ಕಿದೆ. ಉಳಿದಂತೆ ಕಾಂಗ್ರೆಸ್ 8, ಜೆಡಿಎಸ್ 7 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಮೈತ್ರಿ ಆಡಳಿತ ಶತಃಸಿದ್ದ: ಕೆ.ಇ.ಕಾಂತೇಶ್: ಜಿಲ್ಲಾ ಪಂಚಾಯತ್‌ಯಲ್ಲಿ ಬಿಜೆಪಿ ಮೈತ್ರಿ ಆಡಳಿತ ನಿಶ್ಚಿತವಾಗಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ಶೇ. 100 ಕ್ಕೆ 100 ರಷ್ಟು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇತರೆ ಪಕ್ಷದವರು ಏನೇ ಹೇಳಲಿ. ಆ ಬಗ್ಗೆ ತಮ್ಮ ಪಕ್ಷ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಪಕ್ಷದ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಇ.ಕಾಂತೇಶ್‌ರವರು ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಮತದಾರರು ಬಿಜೆಪಿ ಪರ ಒಲವು ವ್ಯಕ್ತಪಡಿಸಿ, ಅತ್ಯಧಿಕ 15 ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಜನಾಭಿಪ್ರಾಯದಂತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಬಹುಮತಕ್ಕೆ ಓರ್ವ ಸದಸ್ಯರ ಕೊರತೆಯಿದೆ. ಜೆಡಿಎಸ್ ನೊಂದಿಗೆ ಮೈತ್ರಿ ಮಾತುಕತೆ ನಡೆದಿದೆ ಎಂದು ಕೆ.ಇ.ಕಾಂತೇಶ್ ತಿಳಿಸಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆ ನಡೆದಿದೆ :ಎಂ.ಶ್ರೀಕಾಂತ್:
ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮೈತ್ರಿ ಮಾತುಕತೆ ನಡೆದಿರುವುದು ನಿಜ. ಪಕ್ಷದ ವರಿಷ್ಠರು ನೀಡುವ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದುೞಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್‌ರವರು ಸ್ಪಷ್ಟಪಡಿಸಿದ್ದಾರೆ. ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಕ್ಷದ ಎಲ್ಲ ಸದಸ್ಯರು ಜೊತೆಯಲ್ಲಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಗೊಂದಲಗಳಿಲ್ಲವಾಗಿದೆ. ಸದಸ್ಯರೆಲ್ಲರೂ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಿರುವುದಾಗಿ ಹೇಳಿದ್ದಾರೆ. ಗುರುವಾರ ಬೆಳಗ್ಗೆ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







