ಅವೆಜ್ಞಾನಿಕ ಮೀನುಗಾರಿಕೆ: ದೂರು, ಪ್ರತಿ ದೂರು
ಕಾರವಾರ, ಮೇ 4: ಕಾಳಿ ನದಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೈಸೂರು ಮೂಲದ ಎಚ್.ಡಿ. ಕೋಟೆಯ ನಿವಾಸಿಗಳಾದ ಮೂವರು ಮೀನುಗಾರರು ಸತತವಾಗಿ ಮೀನುಗಾರಿಕೆ ನಡೆಸುತ್ತಿದ್ದು, ಇದರಿಂದ ಸ್ಥಳೀಯ ಮೀನುಗಾರರು ಬದುಕುವುದೇ ಕಷ್ಟವಾಗಿದೆ. ತಕ್ಷಣ ಇವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಮೀನುಗಾರರು ದೂರು ಸಲ್ಲಿಸಿದರು.
ಆದರೆ ಅದೇ ಭಾಗದ ಬೋಳೆ ಮತ್ತು ಮಲ್ಲಾಪುರ ಗ್ರಾಮದ ಸಾರ್ವಜನಿಕರು ಈ ಮೂವರಿಗೆ ಮೀನುಗಾರಿಕೆ ನಡೆಸಿ ಬದುಕಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪೊಲೀಸ್ ಇಲಾಖೆಯ ಡಿವೈಎಸ್ಪಿ ಎನ್.ಟಿ.ಪ್ರಮೋದ್ ರಾವ್ ಅವರಿಗೆ ದೂರು ನೀಡಿದ ಪ್ರಹಸನ ನಡೆಯಿತು.
ಇಲ್ಲಿನ ಮೀನುಗಾರರು ತಲೆತಲಾಂತರಗಳಿಂದ ಮೀನುಗಾರಿಕೆ ನಡೆಸಿ ಬದುಕುತ್ತಿದ್ದಾರೆ. ಆದರೆ ಮೈಸೂರು ಮೂಲದ ಮೂವರು ವ್ಯಕ್ತಿಗಳಾದ ಬಸಪ್ಪ, ಶಂಕರ್, ಸ್ವಾಮಿ ಎಂಬ ಮೀನುಗಾರರು ಕಾಳಿ ನದಿಯಲ್ಲಿ ಬಲೆಗೆ ರಾಸಾಯನಿಕ ಸಿಂಪಡಿಸಿ ಅವ್ಯಾಹತವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಮೀನುಗಳು ಬಲೆಯಲ್ಲಿ ಸಿಲುಕಿ ತಕ್ಷಣ ಸಾಯುತ್ತವೆ. ಹೀಗಾಗಿ ಬಲೆಗೆ ಸಿಕ್ಕಿದ ಮೀನು ಅಲ್ಲದೇ ಬಲೆಯ ಸಮೀಪದಿಂದ ಹಾದು ಹೋಗುವ ಮೀನುಗಳು ರಾಸಾಯನಿಕದ ಪರಿಣಾಮದಿಂದ ಸಾಯುತ್ತವೆ ಎಂದು ಆರೋಪಿಸಿದರು.
ನದಿಯಲ್ಲಿ ಮೀನು ಸಂತತಿ ನಾಶವಾಗುತ್ತಿದೆ. ಇದರ ಪರಿಣಾಮದಿಂದಾಗಿ ಕಾಳಿ ನದಿಯ ಎರಡೂ ದಂಡೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರ ಜೀವನ ಸಂಕಷ್ಟಕ್ಕೀಡಾಗಿದೆೆೆ. ಆ ಮೂವರಿಗೆ ಇಲ್ಲಿಂದ ಹೋಗುವಂತೆ ನಾವು ಎಷ್ಟೇ ಬೇಡಿಕೊಂಡರೂ ಕೆಲ ಸ್ಥಳೀಯರ ಕುಮ್ಮಕ್ಕು ಆ ಮೂವರು ಮೀನುಗಾರರಿಗೆ ಇದೆ. ಬೋಳೆ ಹಾಗೂ ಮಲ್ಲಾಪುರ ಗ್ರಾಮಸ್ಥರ ಸಂರಕ್ಷಣೆಯಲ್ಲಿ ಅವರು ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಆದ್ದರಿಂದ ಮೈಸೂರು ಮೂಲದ ಆ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಹಣಕೋಣ ಮಾದರಿಯಲ್ಲಿ ಉಗ್ರ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಸಾರ್ವಜನಿಕರಿಂದ ದೂರಿಗೆ ಪ್ರತಿ ದೂರು: ಮಲ್ಲಾಪುರ ಮತ್ತು ಬೋಳ್ವೆ ಗ್ರಾಮದಲ್ಲಿ ನೆಲೆಸಿರುವ ಈ ಮೂವರು ಮೀನುಗಾರರು, ಹೊರ ರಾಜ್ಯದ ಗೋವಾ ಅಥವಾ ಕಾರವಾರ, ಮಂಗಳೂರು ಮಾರುಕಟ್ಟೆಗೆ ಮೀನನ್ನು ರಫ್ತು ಮಾಡುವುದಿಲ್ಲ. ಇಲ್ಲಿ ಸಿಕ್ಕಿದ ಮೀನನ್ನು ಇಲ್ಲೇ ಸ್ಥಳೀಯ ಜನರಿಗೆ ಅವರು ಮಾರಾಟ ಮಾಡುತ್ತಾರೆ. ಆದರೆ ಇಲ್ಲಿನ ಮೀನುಗಾರರು ಹೆಚ್ಚಿನ ಬೆಲೆಗಾಗಿ ಬೇರೆ ಕಡೆ ಮಾರಾಟಕ್ಕಾಗಿ ಸಾಗಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಸ್ಥಳೀಯರಿಗೆ ತಿನ್ನಲು ಮೀನು ಸಿಗುತ್ತಿಲ್ಲ. ಇವರು ಬಲೆಗೆ ರಾಸಾಯನಿಕ ಸಿಂಪಡಿಸಿ ಮೀನುಗಾರಿಕೆ ಮಾಡುತ್ತಾರೆ ಎಂಬ ದೂರು ಸತ್ಯಕ್ಕೆ ದೂರವಾದದ್ದಾಗಿದೆ. ಇಲ್ಲಿನ ಸ್ಥಳೀಯ ಮೀನುಗಾರರ ಆರೋಪ ಶುದ್ಧ ಸುಳ್ಳು ಎಂದು ಬೋಳೆ ಮತ್ತು ಮಲ್ಲಾಪುರ ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ನಮ್ಮ ಗ್ರಾಮದಲ್ಲಿ ಅವರು ನೆಲೆಸಿ ಮೀನುಗಾರಿಕೆ ನಡೆಸುವುದರಿಂದ ನಮ್ಮ ಯಾವ ಆಕ್ಷೇಪಣೆಯೂ ಇಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇವರು ಬೋಳೆ ಮತ್ತು ಮಲ್ಲಾಪುರಗಳಲ್ಲಿ ತಾತ್ಕಾಲಿಕವಾಗಿ ನೆಲೆಸಿ ಮಳೆಗಾಲ ಆರಂಭವಾಗುತ್ತಿದ್ದಂತೆ ಮೈಸೂರಿಗೆ ಮರಳುತ್ತಾರೆ. ಆದ್ದರಿಂದ ಕಾಳಿ ನದಿಯಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಎರಡೂ ಬಣದ ಪ್ರಮುಖರನ್ನು ಠಾಣೆಗೆ ಕರೆಸಿಕೊಂಡ ಡಿವೈಎಸ್ಪಿ ಎನ್. ಟಿ. ಪ್ರಮೋದ್ ರಾವ್ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಎರಡೂ ಬಣಗಳ ಮುಖಂಡರ ವಾದ ವಿವಾದ ಆಲಿಸಿ, ಈ ಬಗ್ಗೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಅಲ್ಲಿಯವರೆಗೂ ಮೈಸೂರು ಮೂಲದ ಮೀನುಗಾರರಿಗೆ ಮೀನುಗಾರಿಕೆ ನಡೆಸದಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮೂವರು ಮೀನುಗಾರರ ಪರವಾಗಿ ಮಲ್ಲಾಪುರ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಬಾಂದೇಕರ, ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ದೇವಿದಾಸ ಬೆಳ್ಳೂರುಕರ ಹಾಗೂ ಸ್ಥಳೀಯ ಮೀನುಗಾರರ ಪರವಾಗಿ ಜಿಪಂ ಸದಸ್ಯ ಕೃಷ್ಣಾ ಮೆಹ್ತಾ, ಉದಯ ಬಾಂದೇಕರ, ಜೀವನ್ ಸೈಲ್, ರೋಹಿದಾಸ ವೈಂಗಣಕರ, ಸತೀಶ್ ಪಾಗಿ, ಕರಣ್ ದಾಮ್ಸೇಳಕರ, ಶೇಖರ್ ಪಾಗಿ, ಸಂದೀಪ್ ಪಾಗಿ, ಶಾಂತಾ ಪಾಗಿ, ರಾಜೇಶ್ ಉಳ್ವೇಕರ, ಸದಾ ಹರಿಕಂತ್ರ, ವಿನಾಯಕ ಹರಿಕಂತ್ರ ಮುಂತಾದವರು ಉಪಸ್ಥಿತರಿದ್ದರು.







