ತೀರ್ಥಹಳ್ಳಿಗೆ ಬರ ಅಧ್ಯಯನ ತಂಡ ಭೇಟಿ
ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಅಧಿಕಾರಿಗಳು

ತೀರ್ಥಹಳ್ಳಿ, ಮೇ 4: ತಾಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರದ ಸ್ಥಿತಿಯ ವಾಸ್ತವ ವರದಿ ಸಂಗ್ರಹಿಸಲು ಆರು ಅಧಿಕಾರಿಗಳ ತಂಡ ತಾಲೂಕಿನ ಆರು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿ ಸಮಗ್ರ ಮಾಹಿತಿ ಸಂಗ್ರಹಿಸಿದೆ.
ತಾಲೂಕಿನ ಹಲವೆಡೆ ಕಳೆದ 15 ದಿನಗಳಿಂದ ಬರದ ಛಾಯೆ ತಲೆದೋರಿದ್ದು, ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ಬರದ ಸಮೀಕ್ಷೆ ನಡೆಸಲು ಆಗಮಿಸಿದ ಅಧಿಕಾರಿಗಳ ತಂಡ ತಾಲೂಕಿನ ನಾಲೂರು, ಕೊಳಗಿ, ನೆರಟೂರು, ಕನ್ನಂಗಿ, ಅರೆಹಳ್ಳಿ, ತೂದೂರು ಹಾಗೂ ದೇವಂಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮಸ್ಥರಿಂದ ಅಹವಾಲು ಆಲಿಸಿತು.
ಈ ಭಾಗಗಳಲ್ಲಿ ತೀವ್ರವಾಗಿ ಕಾಡಿರುವ ಕುಡಿಯುವ ನೀರಿನ ಹಾಹಾಕಾರ ನೀಗಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಕೆಲವು ಪ್ರದೇಶಗಳಲ್ಲಿ ಜಾನುವಾರುಗಳಿಗೂ ಕುಡಿಯುವ ನೀರು ಸಿಗದಂತಾಗಿದೆ. ಬೋರ್‌ವೆಲ್ ಹಾಗೂ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗಿದ್ದು, ಗ್ರಾಮಸ್ಥರು ಪಕ್ಕದ ಊರಿಗೆ ನೀರು ತರಲು ವಲಸೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಾಲೂರು ಗ್ರಾಪಂ ಬಗ್ಗೊಡಿಗೆ ಗ್ರಾಮದಲ್ಲಿ ಕೃಷಿ ಉಪ ನಿರ್ದೇಶಕ ಎ.ಪಿ.ಅರುಣ್, ತೂದೂರು ಗ್ರಾಪಂ ಉಬ್ಬೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಇಲಾಖೆಯ ಎಇಇ ಎಸ್.ಕೆ.ಹೆಗಡೆ, ನೆರಟೂರು ಗ್ರಾಪಂನ ತುಡಾನಕಲ್ ಗ್ರಾಮದಲ್ಲಿ ತಾಪಂ ಇಒ ಲಕ್ಷ್ಮಣ, ಕನ್ನಂಗಿ ಗ್ರಾಪಂ ವ್ಯಾಪ್ತಿಯಲ್ಲಿ ರೇಷ್ಮೆ ಇಲಾಖೆ ನಿರ್ದೇಶಕ ತಮ್ಮಣ್ಣಗೌಡ, ಅರೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಖಾದಿ ಗ್ರಾಮೋದ್ಯೋಗಿ ಇಲಾಖೆ ರುದ್ರಪ್ಪ ಬರ ಪರಿಸ್ಥಿತಿಯ ವೀಕ್ಷಣೆ ನಡೆಸಿದರು.







