ರೋಗ ನಿಯಂತ್ರಣಕ್ಕೆ ತೋಟಗಾರಿಕಾ ಇಲಾಖೆ ಸಲಹೆ
997.1 ಹೆಕ್ಟೇರ್ ಪ್ರದೇಶದಲ್ಲಿ ಮಾವು ಕೃಷಿ

ಮಡಿಕೇರಿ, ಮೇ 4: ಮಾವು ಬೆಳೆಯುವ ಒಟ್ಟು ಪ್ರದೇಶ ಹಾಗೂ ಒಟ್ಟು ಉತ್ಪಾದನೆಯಲ್ಲಿ ದೇಶ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ವರ್ಷವೂ ಸಾಗುವಳಿ ಪ್ರದೇಶ ಹಾಗೂ ಉತ್ಪಾದನೆ ಹೆಚ್ಚುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಮಾವು ಕೃಷಿ ಇದ್ದು ಮಡಿಕೇರಿ ತಾಲೂಕು 116.1 ಸೋಮವಾರ ಪೇಟೆ ತಾಲೂಕು 555.2 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 325.8 ಸೇರಿ ಒಟ್ಟು 997.1 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಲಾಗುತ್ತಿದೆ.
ಈಗಾಗಲೇ ಮಾವು ಕಟಾವಿಗೆ ಬರುವ ಸಮಯ. ಒಂದು ಮಳೆ ಬಿದ್ದ ಮೇಲೆ ಒಮ್ಮೆಲೇ ಹಣ್ಣು ಮಾಗಿ ಕಾಯಿ ಕೊಯ್ಲಿಗೆ ತಯಾರಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಕೀಟಗಳು ಬರುವ ಸಂಭವವಿದೆ. ಸಾಮಾನ್ಯವಾಗಿ ಕಾಣುವುದು ಮಾವಿನ ಹಣ್ಣಿನ ಊಜಿ ನೊಣ ನಿಯಂತ್ರಣ ಈಗಾಗಲೇ ಅಳವಡಿಸಲಾದ ಮೋಹಕ ಬಲೆಯಲ್ಲಿನ ಮೋಹಕಧಾತುವನ್ನು ಬದಲಿಸುವುದು. ಬಿದ್ದ ಹಣ್ಣುಗಳನ್ನು ಸಂಗ್ರಹಿಸಿ ನಾಶ ಮಾಡುವುದು. ಊಜಿ ನೊಣದ ಬಾಧೆ ಹೆಚ್ಚು ಇದ್ದಲ್ಲಿ 1 ಲೀ. ನೀರಿನಲ್ಲಿ 1 ಮಿ.ಲೀ. ಡೈಮಿಥೋಯೇಟ್ 30 ಇಸಿ ಜೊತೆಗೆ 10 ಗ್ರಾಂ ಬೆಲ್ಲವನ್ನು ಕರಗಿಸಿ ಹಣ್ಣು ಮಾಗುವ ಹಂತದಲ್ಲಿ ಸಿಂಪರಣೆ ಮಾಡಬಹುದು ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.
ರೋಗದ ಲಕ್ಷಣಗಳು ಕಂಡುಬಂದಲ್ಲಿ ಮ್ಯಾಂಕೋಜೆಬ್ 2 ಗ್ರಾಂ 1 ಲೀ. ನೀರಿನಲ್ಲಿ ಸಿಂಪರಣೆ ಮಾಡಬಹುದು. ಕುಯ್ಲು ಮಾಡಿದ ನಂತರ ಹಣ್ಣುಗಳನ್ನು 52ಅ ಉಷ್ಣತೆಯಿರುವ ನೀರಿನಲ್ಲಿ 10 ನಿಮಿಷಗಳ ಕಾಲ ಮುಳುಗಿಸಿ ನಂತರ ಶೇ. 0.05ರ ದ್ರಾವಣದಿಂದ ಉಪಚರಿಸಬೇಕು.
ಮಾವು ಹಾಗೂ ಇತರ ಹಣ್ಣುಗಳನ್ನು ಎಲ್ಲರೂ ತಿನ್ನುವುದರಿಂದ ರಾಸಾಯನಿಕ ಕೀಟ/ರೋಗನಾಶಕಗಳ ಅಗತ್ಯವಿದ್ದಲ್ಲಿ ಸೂಚಿಸಿದ ಪ್ರಮಾಣದಲ್ಲಿ ಉಪಯೋಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ದೂ.ಸಂಖ್ಯೆ:08272-228432, ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮಡಿಕೇರಿ ದೂ:08272-220555, ಹಾರ್ಟಿ ಕ್ಲಿನಿಕ್ (ಮಾಹಿತಿ ಮತ್ತು ಸಲಹಾ ಕೇಂದ್ರ) ದೂ:08272-220232, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಸೋಮವಾರಪೇಟೆ ದೂ:08276-281364, ಸಹಾಯಕ ತೋಟಗಾರಿಕೆ ನಿರ್ದೇಶಕರು, ಪೊನ್ನಂಪೇಟೆ ದೂ:08274-249637 ರವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಹಾರ್ಟಿ ಕ್ಲಿನಿಕ್ ಅವರು ತಿಳಿಸಿದ್ದಾರೆ.







