ಆಯುಕ್ತೆ ತುಷಾರಮಣಿ ಭೇಟಿ, ಪರಿಶೀಲನೆ
ಶಿವಮೊಗ್ಗ ರಾಜಕಾಲುವೆ ಅವ್ಯವಸೆ್ಥ

ಶಿವಮೊಗ್ಗ, ಮೇ 4: ನಗರದ ಕಸ್ತೂರ್ಬಾ ಕಾಲೇಜು ರಸ್ತೆಯ ಕಮಲಾ ನೆಹರೂ ಕಾಲೇಜು ಬಳಿ ಹಾದು ಹೋಗಿರುವ ರಾಜ ಕಾಲುವೆಯ ಅವ್ಯವಸ್ಥೆಯಿಂದ ಮಂಗಳವಾರ ರಾತ್ರಿ ಕಾಲೇಜ್ ಹಾಗೂ ರಸ್ತೆಗೆ ಕೊಳಚೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಆಯುಕ್ತೆ ತುಷಾರಮಣಿ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಾರ್ಡ್ ವ್ಯಾಪ್ತಿಯ ಕಾರ್ಪೊರೇಟರ್ ಆದ ಐಡಿಯಲ್ ಗೋಪಿ ಮಾತನಾಡಿ, ನಗರದಲ್ಲಿ ಹಾದು ಹೋಗಿರುವ ಪ್ರಮುಖ ರಾಜ ಕಾಲುವೆಗಳಲ್ಲಿ ಇದು ಕೂಡ ಒಂದಾಗಿದೆ. ಆದರೆ ಕಮಲಾ ನೆಹರೂ ಕಾಲೇಜ್ ಬಳಿ ಮಳೆಗಾಲದ ವೇಳೆ ಸರಾಗವಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ, ಕಾಲೇಜ್ ಹಾಗೂ ರಸ್ತೆಗೆ ಕೊಳಚೆ ನೀರು ನುಗ್ಗುತ್ತಿದೆ. ಇದರಿಂದ ನಾಗರಿಕರು, ಕಾಲೇಜು ವಿದ್ಯಾರ್ಥಿನಿಯರು ತೀವ್ರ ಅನಾನುಕೂಲ ಎದುರಿಸುತ್ತಿದ್ದಾರೆ ಎಂದರು. ಈಗಾಗಲೇ ಹಲವು ಬಾರಿ ಸಂಬಂ ಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಮಳೆ ಬಿದ್ದಾಗಲೆಲ್ಲ ಸಮಸ್ಯೆ ಸೃಷ್ಟಿಯಾಗುವಂತಾಗಿದೆ. ಈ ಸ್ಥಳದಲ್ಲಿ ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು. ಇನ್ನು ಮುಂದೆ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು. ಅನಿವಾರ್ಯವಾದರೆ ಈ ಸ್ಥಳದಲ್ಲಿನ ರಾಜಕಾಲುವೆ ವಿಸ್ತರಣೆ ಮಾಡಬೇಕು ಎಂದು ಆಯುಕ್ತರಿಗೆ ತಿಳಿಸಿದರು. ಪಾಲಿಕೆ ಅಧಿಕಾರಿಗಳು ಮಾತನಾಡಿ, ಕೆಲ ನಾಗರಿಕರು ಘನತ್ಯಾಜ್ಯ ವಸ್ತುಗಳನ್ನು ರಾಜ ಕಾಲುವೆಗೆ ಹಾಕುತ್ತಿರುವುದರಿಂದ ಸರಾಗವಾಗಿ ಮಳೆ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಮಲಾ ನೆಹರೂ ಕಾಲೇಜು ಬಳಿ ಕಿರಿದಾಗಿರುವ ಕಾಲುವೆಯ ಬಳಿ ಘನತ್ಯಾಜ್ಯ ವಸ್ತುಗಳು ತುಂಬಿಕೊಂಡು, ರಸ್ತೆಯ ಮೇಲೆಯೇ ಕಾಲುವೆ ನೀರು ಹರಿಯಲು ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು. ಆಯುಕ್ತೆ ತುಷಾರಮಣಿ ಮಾತನಾಡಿ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆಯಾಗದಂತೆ ಎಚ್ಚರವಹಿಸಿ. ರಾಜಕಾಲುವೆಯಲ್ಲಿ ತುಂಬಿರುವ ಕಸಕಡ್ಡಿ, ಹೂಳನ್ನು ತೆಗೆಯಿರಿ. ಅಗತ್ಯವಾದರೆ ರಾಜಕಾಲುವೆ ದುರಸ್ತಿ ಕಾರ್ಯಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಚರಂಡಿ ಹಾಗೂ ರಾಜ ಕಾಲುವೆಗಳಿಗೆ ಘನತ್ಯಾಜ್ಯ ವಸ್ತುಗಳನ್ನು ಎಸೆಯುವುದರಿಂದ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಚರಂಡಿ-ರಾಜಕಾಲುವೆಗೆ ಘನತ್ಯಾಜ್ಯ ವಸ್ತುಗಳನ್ನು ನಾಗರಿಕರು ಹಾಕಬಾರದು. ನಿಗದಿತ ಸ್ಥಳಗಳಲ್ಲಿಯೇ ವಿಲೇವಾರಿ ಮಾಡಬೇಕು ಎಂದು ಆಯುಕ್ತೆ ಮನವಿ ಮಾಡಿದ್ದಾರೆ. ಲೋಡ್‌ಗಟ್ಟಲೆ ಕಸ: ಈ ರಾಜಕಾಲುವೆಯಲ್ಲಿ ತುಂಬಿಕೊಂಡಿದ್ದ ಲೋಡ್‌ಗಟ್ಟಲೆ ಘನತ್ಯಾಜ್ಯವನ್ನು ಪಾಲಿಕೆ ಪೌರಕಾರ್ಮಿಕರು ಹೊರತೆಗೆದರು. ಸುಮಾರು ಮೂರು ಲಾರಿ ಲೋಡ್‌ಗಳಷ್ಟು ಘನತ್ಯಾಜ್ಯ ಇಲ್ಲಿ ತುಂಬಿಕೊಂಡಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಪೌರಕಾರ್ಮಿಕರು ಅವಿರತ ಕಾರ್ಯಾಚರಣೆ ನಡೆಸಿ ಈ ಘನತ್ಯಾಜ್ಯ ತೆಗೆದಿದ್ದಾರೆ ಎಂದು ಪಾಲಿಕೆಯ ಅಧಿಕಾರಿಯೋರ್ವರು ತಿಳಿಸಿದರು.





