ಲಂಡನ್‌ನ ಪ್ರಪ್ರಥಮ ಮುಸ್ಲಿಮ್ ಮೇಯರ್ ಸಾದಿಕ್ ಖಾನ್ ?
ಪ್ರತಿಷ್ಠಿತ ಹುದ್ದೆಯತ್ತ ಬಸ್ ಡ್ರೈವರ್ ಪುತ್ರನ ದಾಪುಗಾಲು

ಲಂಡನ್, ಮೇ 4: ಪಾಕಿಸ್ತಾನಿ ಬಸ್ ಡ್ರೈವರ್ ಒಬ್ಬರ ಪುತ್ರ ಲಂಡನ್‌ನ ಪ್ರಪ್ರಥಮ ಮುಸ್ಲಿಮ್ ಮೇಯರ್ ಆಗಿ ಆಯ್ಕೆಯಾಗುವತ್ತ ದಾಪುಗಾಲು ಹಾಕಿದ್ದಾರೆ. ಲೇಬರ್ ಪಕ್ಷದ ಅಭ್ಯರ್ಥಿ ಸಾದಿಕ್ ಖಾನ್, ತಮ್ಮ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಝ್ಯೆಕ್ ಗೋಲ್ಡ್ ಸ್ಮಿತ್ ಅವರಿಗಿಂತ ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿ ಕನಿಷ್ಠ 9 ಪಾಯಿಂಟ್ ಮುಂದಿದ್ದಾರೆ.
ಮೇಯರ್ ಚುನಾವಣಾ ಪ್ರಚಾರದ ಆರಂಭದಿಂದಲೇ ಸಾದಿಕ್ ಅವರು ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷ. ಗುರುವಾರ ಚುನಾವಣೆ ನಡೆಯಲಿದೆ.
ಝ್ಯೆಕ್ ಅವರು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಜೆಮಿಮಾ ಖಾನ್‌ರ ಸೋದರ.
ನಿನ್ನೆ ‘ಇವ್ನಿಂಗ್ ಸ್ಟಾಂಡರ್ಡ್’ ನಡೆಸಿದ ಸಮೀಕ್ಷೆಯಲ್ಲಿ ಸಾದಿಕ್ ಖಾನ್ ಅವರು 35 ಶೇ. ಪ್ರಥಮ ಆದ್ಯತೆ ಮತಗಳನ್ನು ಪಡೆದಿದ್ದರೆ, ಗೋಲ್ಡ್ ಸ್ಮಿತ್ ಅವರು 26 ಶೇ.ಮಾತ್ರ ಪಡೆದಿದ್ದಾರೆ. ಎರಡನೆ ಆದ್ಯತೆ ಮತಗಳಲ್ಲಿ ಖಾನ್ 57 ಶೇ. ಹಾಗೂ ಗೋಲ್ಡ್ ಸ್ಮಿತ್ 43 ಶೇ. ಮತ ಪಡೆಯುವ ಮೂಲಕ ಈ ಮುನ್ನಡೆ ಇನ್ನಷ್ಟು ಹೆಚ್ಚಿದೆ.
ಕಾಶ್ಮೀರಿ ಮೂಲದ ಅಂಕಿತ್ ಲೊವ್ ಸಹಿತ ಬೇರೆ ಯಾವುದೇ ಅಭ್ಯರ್ಥಿ 4 ಶೇ.ಕ್ಕಿಂತ ಹೆಚ್ಚು ಮತ ಪಡೆದಿಲ್ಲ. ಮಾಜಿ ಮಾನವ ಹಕ್ಕು ನ್ಯಾಯವಾದಿ ಖಾನ್ 2005ರಿಂದ ಪೂರ್ವ ಲಂಡನ್‌ನ ಟೂಟಿಂಗ್‌ನಿಂದ ಸಂಸದರಾಗಿದ್ದಾರೆ.
ಈ ಹಿಂದಿನ ಲೇಬರ್ ಪಕ್ಷದ ಪ್ರಧಾನಿ ಗೊರ್ಡನ್ ಬ್ರವ್ನೃ್ ಅವರ ಸಂಪುಟದಲ್ಲಿ ಪ್ರಮುಖ ಸಚಿವರಾಗಿದ್ದ ಖಾನ್ ಆ ಬಳಿಕ ಲಂಡನ್ ಮೇಯರ್ ಸ್ಥಾನದ ಚುನಾವಣಾ ಪ್ರಚಾರದ ಸಿದ್ಧತೆಗಾಗಿ ಸಂಪುಟದಿಂದ ಹೊರ ಬಂದಿದ್ದರು. ಕನ್ಸರ್ವೇಟಿವ್ ಗೋಲ್ಡ್ ಸ್ಮಿತ್ ಅವರ ವಿಲಾಸಿ ವ್ಯಕ್ತಿತ್ವದ ಎದುರು ಖಾನ್ ಅವರು ತನ್ನ ಸಾಮಾನ್ಯ ಹಿನ್ನೆಲೆ ಹಾಗೂ ಮಧ್ಯಮ ವರ್ಗದ ಶ್ರಮಿಕ ಹಿನ್ನೆಲೆಯನ್ನೇ ನೆಚ್ಚಿಕೊಂಡು ಪ್ರಚಾರಕ್ಕಿಳಿದಿದ್ದರು.







