ಇಂದು ಡೆಲ್ಲಿಗೆ ಗೆಲುವಿನ ವಿಶ್ವಾಸ, ಪುಣೆಗೆ ಗಾಯಾಳುಗಳ ಚಿಂತೆ

ಹೊಸದಿಲ್ಲಿ, ಮೇ 4: ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಗುರುವಾರ ತವರು ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸತತ ಸೋಲು, ಆಟಗಾರರ ಗಾಯಾಳು ಸಮಸ್ಯೆಯಿಂದ ಕಂಗಾಲಾಗಿರುವ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡವನ್ನು ಎದುರಿಸಲಿದೆ.
ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್, ಕೇವಿನ್ ಪೀಟರ್ಸನ್ ಹಾಗೂ ಎಫ್‌ಡು ಪ್ಲೆಸಿಸ್ ಗಾಯಾಳುವಾಗಿರುವ ಕಾರಣ ಸಮಸ್ಯೆಗೆ ಸಿಲುಕಿರುವ ಪುಣೆ ತಂಡ ಈ ತನಕ ಆಡಿರುವ 8 ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಜಯ ಸಾಧಿಸಿದೆ. ಕೂಟದಲ್ಲಿ ಇನ್ನೂ ಆರು ಪಂದ್ಯಗಳನ್ನು ಆಡಲಿರುವ ಎಂಎಸ್ ಧೋನಿ ನಾಯಕತ್ವದ ಪುಣೆಗೆ ನಾಕೌಟ್ ಹಂತಕ್ಕೆ ತಲುಪಲು ಕಠಿಣ ಸವಾಲು ಎದುರಿಸಬೇಕಾಗಿದೆ.
ಪುಣೆ ತಂಡ 200ಕ್ಕೂ ಅಧಿಕ ರನ್ ಗಳಿಸಿದರೂ ಬೌಲರ್‌ಗಳ ಕಳಪೆ ಪ್ರದರ್ಶನದಿಂದಾಗಿ ಗೆಲ್ಲಲು ವಿಫಲವಾಗಿತ್ತು. ಬೌಲರ್‌ಗಳಾದ ಅಶೋಕ್ ದಿಂಡ, ಅಲ್ಬಿ ಮೊರ್ಕೆಲ್, ತಿಸ್ಸಾರ ಪೆರೇರ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಮತ್ತೊಂದೆಡೆ, ಡೆಲ್ಲಿ ತಂಡ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದೆ. ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ತಂಡವನ್ನು ಮಣಿಸಿತ್ತು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು.
ತಂಡದ ಹಿರಿಯ ಆಟಗಾರರು ಹೆಚ್ಚಿನ ಜವಾಬ್ದಾರಿಯಿಂದ ಆಡುತ್ತಿದ್ದಾರೆ. ಯುವ ಆಟಗಾರರಿಗೂ ಹೆಚ್ಚಿನ ಅವಕಾಶವನ್ನು ನೀಡಲಾಗುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ನಾಯಕ ಝಹೀರ್ ಖಾನ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇದು ತಂಡದ ಗೆಲುವಿಗೆ ನೆರವಾಗಿದೆ. ಬೌಲಿಂಗ್ ದಾಳಿಯನ್ನು ಆರಂಭಿಸುವ ಖಾನ್ ಆರಂಭದಲ್ಲೇ ವಿಕೆಟ್ ಕಬಳಿಸುತ್ತಾರೆ. ಡೆತ್ ಓವರ್‌ನಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡುತ್ತಾರೆ. ಝಹೀರ್ ಒಮ್ಮೆ ಲಯ ಕಂಡುಕೊಂಡರೆ ಅವರನ್ನು ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಷ್ಟ.
ಈ ವರ್ಷ ಡೆಲ್ಲಿಯ ಸ್ಥಿರ ಪ್ರದರ್ಶನದಲ್ಲಿ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ನಿರ್ಣಾಯಕ ಪಾತ್ರವಹಿಸಿದ್ದಾರೆ. ಡೆಲ್ಲಿಯ ಬ್ಯಾಟ್ಸ್‌ಮನ್‌ಗಳು ಉನ್ನತ ಫಾರ್ಮ್‌ನಲ್ಲಿದ್ದಾರೆ. ಕ್ವಿಂಟನ್ ಡಿಕಾಕ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಯುವ ದಾಂಡಿಗ ರಿಷಬ್ ಪಂತ್ ಲಯನ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ನಿರ್ಭೀತಿಯಿಂದ ಆಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಜೆಪಿ ಡುಮಿನಿ ತಂಡಕ್ಕೆ ವಾಪಸಾಗಿರುವುದು ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ತಂಡಕ್ಕೆ ವಾಪಸಾಗಿದ್ದ ವಿಂಡೀಸ್‌ನ ಆಲ್‌ರೌಂಡರ್ ಕಾರ್ಲಸ್ ಬ್ರಾಥ್‌ವೈಟ್ 11 ಎಸೆತಗಳಲ್ಲಿ 34 ರನ್ ಬಾರಿಸಿದ್ದಲ್ಲದೆ 3 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬ್ರಾಥ್‌ವೈಟ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಸ್ಪಿನ್ನರ್ ಶಹಬಾಝ್ ನದೀಮ್ ಲಯನ್ಸ್ ತಂಡದ ಡ್ವೇಯ್ನ್ ಸ್ಮಿತ್ ಹಾಗೂ ಆ್ಯರೊನ್ ಫಿಂಚ್ ವಿಕೆಟ್ ಉರುಳಿಸಿ ಡೆಲ್ಲಿಗೆ ಮೇಲುಗೈ ತಂದುಕೊಟ್ಟಿದ್ದರು.
ಪಂದ್ಯದ ಸಮಯ: ರಾತ್ರಿ 8:00







