ಒಂದು ತಿಂಗಳ ಅವಧಿಯಲ್ಲಿ 93 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ
ಬಜ್ಪೆ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ

ಮಂಗಳೂರು, ಮೇ 4: ಕಳೆದ ಒಂದು ತಿಂಗಳ ಅವಧಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 93 ಲಕ್ಷ ರೂ. ಮೌಲ್ಯದ ಕಳ್ಳ ಸಾಗಾಟದ ಚಿನ್ನ, ಸಿಗರೇಟ್ ಮತ್ತು ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣವೊಂದರಲ್ಲಿ ಮಿಕ್ಸರ್ ಗ್ರೈಂಡರ್‌ನ ಮೋಟರ್ ಭಾಗದಲ್ಲಿ 2,200 ಕೆ.ಜಿ.ಚಿನ್ನವನ್ನು ಅಡಗಿಸಿಟ್ಟು ಕಳ್ಳಸಾಗಾಟಕ್ಕೆ ಯತ್ನಿಸಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಮೊಬೈಲ್‌ನ ಪವರ್ ಬ್ಯಾಂಕ್‌ನ ಬ್ಯಾಟರಿ ಭಾಗದಲ್ಲಿ ಎರಡು ಸಿಲಿಂಡರ್ ಆಕಾರದ ಚಿನ್ನದ ತುಂಡುಗಳನ್ನು ಅಡಗಿಸಿಟ್ಟು ಕಳ್ಳಸಾಗಾಟಕ್ಕೆ ಯತ್ನಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಸುಮಾರು 68 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಆಯುಕ್ತ ಡಾ.ಎಂ.ಸುಬ್ರಹ್ಮಣ್ಯಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ಅಬುಧಾಬಿ, ದುಬೈ ಪ್ರಯಾಣಿಕರು ವಿದೇಶಿ ಕರೆನ್ಸಿಗಳನ್ನು ಕಳ್ಳ ಸಾಗಾಟ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಜಾಗೃತರಾಗಿದ್ದ ಕಸ್ಟಮ್ಸ್ ಅಧಿಕಾರಿಗಳು ಈ ಸಂಬಂಧ ಕೆಲವರ ಮೇಲೆ ನಿಗಾ ಇಟ್ಟಿದ್ದರು.
ವಿದೇಶಿ ಕರೆನ್ಸಿ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಅವರಿಂದ ಭಾರತೀಯ ಮೌಲ್ಯದ 22.88 ಲಕ್ಷ ರೂ. ಮೌಲ್ಯದ ಕರೆನ್ಸಿಗಳು ಪತ್ತೆಯಾಗಿದ್ದವು. ಅಲ್ಲದೆ, ಕೆಲವು ಪ್ರಯಾಣಿಕರಿಂದ ವಿವಿಧ ಬ್ರಾಂಡ್‌ಗಳ ವಿದೇಶಿ ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಅಂದಾಜು ಮೌಲ್ಯ 93 ಲಕ್ಷ ರೂ. ಎಂದು ಅವರು ತಿಳಿಸಿದ್ದಾರೆ.







